ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಆಂಧ್ರ ಪ್ರದೇಶದವರಾದ ಸತ್ಯನಾರಾಯಣ ರಾವ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಸತ್ಯನಾರಾಯಣ ರಾವ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿರುವ ಸೇವೆ ಅಪಾರ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಆಪ್ತರು, 6 ಬಾರಿ ಸಂಸದರು, 2 ಬಾರಿ ಶಾಸಕರು ಹಾಗೂ ಸಚಿವರಾಗಿದ್ದ ಅವರು ಜನಾನುರಾಗಿಯಾಗಿದ್ದರು ಎಂದು ಸ್ಮರಿಸಿದರು.
ಮೂಲತಃ ವಕೀಲರಾಗಿದ್ದ ಸತ್ಯನಾರಾಯಣ ರಾವ್ ಅವರು ಯೂತ್ ಕಾಂಗ್ರೆಸ್ನಲ್ಲಿ ತೊಡಗಿಸಿಕೊಂಡು ಹಂತ ಹಂತವಾಗಿ ಬೆಳೆದವರು. ದಶಕಗಳ ಕಾಲ ಕಾಂಗ್ರೆಸ್ ತತ್ವ-ಸಿದ್ಧಾಂತಗಳನ್ನು ಉಸಿರಾಡಿದ್ದರು. ಜನ ಸೇವೆಗೆ ಮತ್ತೊಂದು ಹೆಸರಾಗಿದ್ದರು.
ಈ ಹಿರಿಯ ಜೀವ ಕೋವಿಡ್ ಮಹಾಮಾರಿಗೆ ಬಲಿಯಾಗಿರುವ ವಿಚಾರ ಕೇಳಿ ಮನಸಿಗೆ ಬಹಳ ನೋವಾಗಿದೆ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಿವಕುಮಾರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.