ಬೆಂಗಳೂರು :ರಾಜ್ಯದಲ್ಲಿ ಹಿಜಾಬ್ ಗಲಭೆ ಆರಂಭವಾಗಲು ಎರಡು ಶಕ್ತಿಗಳು ಒಂದುಗೂಡಿವೆ. ಇದರಲ್ಲಿ ಮಾನಸಿಕ ಮತ್ತು ಬೌದ್ಧಿಕ ಚಿಂತನೆ ಕಾಂಗ್ರೆಸ್ ಪಕ್ಷದ್ದಾದರೆ, ದೈಹಿಕ ಚಿಂತನೆ ಎಸ್‍ಡಿಪಿಐಯದು. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಜೊತೆಗೂಡಿ ಹಿಜಾಬ್ ಗಲಭೆಯನ್ನು ಸೃಷ್ಟಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ತಮ್ಮ ಯೋಜನೆಗಳ ಮೂಲಕ ಜನಮೆಚ್ಚುಗೆಯನ್ನು ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಿಕೊಂಡಿವೆ.
ಕಾಂಗ್ರೆಸ್ ಪಕ್ಷ ಹಿಜಾಬ್ ಒಳಗೆ ಸೇರಿಕೊಂಡಿದೆ. ಕಾಂಗ್ರೆಸ್‍ಗೆ ಹಿಜಾಬ್ ವಿಚಾರದಲ್ಲಿ ನಷ್ಟ ಆಗುವ ಅರಿವಾಗಿ ಅದು ಆತಂಕಕ್ಕೆ ಒಳಗಾಗಿದೆ ಎಂದು ವಿಶ್ಲೇಷಿಸಿದರು.
ಸಿಎಎ ಗಲಭೆಯಲ್ಲೂ ಕಾಂಗ್ರೆಸ್ ಪಾತ್ರವಿತ್ತು. ಡಿಜೆಹಳ್ಳಿ- ಕೆಜೆಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡವಿತ್ತು. ರಾಜ್ಯದಲ್ಲಿ ಅವಾಂತರ ಮಾಡಲು ಗಲಭೆಗಳಿಗೆ ಕಾಂಗ್ರೆಸ್ ಬೆಂಗಾವಲಾಗಿ ನಿಂತಿದೆ. ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸಿದೆ. ಸದನದಲ್ಲಿ ಚರ್ಚೆ ಮಾಡಬೇಕಿದ್ದ ವಿರೋಧ ಪಕ್ಷವಾದ ಕಾಂಗ್ರೆಸ್, ಧರಣಿ ಮೂಲಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಆಕ್ಷೇಪಿಸಿದರು.
ರಾಜಕಾರಣಕ್ಕಾಗಿ ಕಾಂಗ್ರೆಸ್ಸಿಗರಿಂದ ಧರಣಿ :ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ವಿಧಾನಸಭೆ, ವಿಧಾನಪರಿಷತ್ ಮೇಲೆ ನಂಬಿಕೆ ಇಲ್ಲ. ಕೇವಲ ರಾಜಕಾರಣಕ್ಕಾಗಿ ಕಾಂಗ್ರೆಸ್ಸಿಗರು ಧರಣಿ ಕುಳಿತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್‍ನ ಈ ನಿಲುವನ್ನು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಖಂಡಿಸುತ್ತದೆ. ವಿರೋಧ ಪಕ್ಷವಾಗಿ ಅದು ನಾಲಾಯಕ್ ಪಾರ್ಟಿ ಎಂದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮೇಲೇಳುವುದಿಲ್ಲ ಎಂಬುದು ಆ ಪಕ್ಷದ ನಾಯಕರಿಗೆ ಗೊತ್ತಾಗಿದೆ. ಶಾಲೆಗಳಲ್ಲಿ ಧನಿಕ, ಬಡವ, ಜಾತಿ ವಿಂಗಡನೆ ಆಗಬಾರದೆಂಬ ಕಾರಣಕ್ಕೆ ಸಮವಸ್ತ್ರ ನೀತಿ ಜಾರಿಗೊಳಿಸಲಾಗಿದೆ. ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ. ಶಾಲೆಯೊಳಗೆ ಹಿಜಾಬ್‍ಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರಧ್ವಜ, ಸಂವಿಧಾನ, ಜನಗಣಮನ, ವಂದೇ ಮಾತರಂ ಗೀತೆಗೆ ಬಿಜೆಪಿ ಗೌರವ ನೀಡುತ್ತಿದೆ. ಶಿವಮೊಗ್ಗದ ಕಾಲೇಜೊಂದರಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಸುಳ್ಳು ಮಾಹಿತಿ ನೀಡಿದ್ದರು. ಸುಳ್ಳು, ಮೋಸದ ಮೂಲಕ ಗಲಭೆಗೆ ಪ್ರೇರೇಪಿಸಿದ್ದರು. ಕಾಂಗ್ರೆಸ್ಸಿಗರು ರಾಷ್ಟ್ರಧ್ವಜ, ಜನಗಣಮನಕ್ಕೆ ಗೌರವ ಕೊಡುವುದಿಲ್ಲ. ಅವರೇನಿದ್ದರೂ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಜೈಕಾರವನ್ನಷ್ಟೇ ಕೂಗುತ್ತಾರೆ ಎಂದರು.
ಗಲಭೆ ಸೃಷ್ಟಿಸುವ ಉದ್ದೇಶದಿಂದ ಯುವಕನ ಹತ್ಯೆ :ಕಾಂಗ್ರೆಸ್ಸಿಗರು ನಮಗೆ ರಾಷ್ಟ್ರಭಕ್ತಿಯ ಪಾಠ ಹೇಳಬೇಕಿಲ್ಲ. ರಾಷ್ಟ್ರಧ್ವಜ ಮತ್ತು ಕೇಸರಿ ಧ್ವಜಗಳೆರಡನ್ನೂ ನಾವು ಗೌರವಿಸುತ್ತೇವೆ. ಕಾಂಗ್ರೆಸ್ ಪಕ್ಷದ ಗಲಭೆ ಸೃಷ್ಟಿಸುವ ಪ್ರಯತ್ನದ ಫಲವಾಗಿ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಈ ಹತ್ಯೆಗೆ ಕಾರಣವಾದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಕೊಲೆಯ ಹಿಂದಿನ ಕೈವಾಡ, ಶಕ್ತಿಗಳನ್ನು ಪೊಲೀಸ್ ಇಲಾಖೆ ಹೊರಕ್ಕೆ ತರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸದನದಲ್ಲಿ ಧರಣಿ ಮಾಡಿ ನಿದ್ದೆಗೆಟ್ಟು ಈಶ್ವರಪ್ಪ ಅವರ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ ಎಂದ ಅವರು, ಹಿಜಾಬ್ ಕುರಿತ ಚರ್ಚೆ ವಿಧಾನಸಭೆಯಲ್ಲಿ ನಡೆಯಬಾರದು ಮತ್ತು ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಒಳಜಗಳದ ಕಾರಣಕ್ಕೇ ಧರಣಿ ನಡೆಸಲಾಗುತ್ತಿದೆ.
ಹಿಜಾಬ್‍ನ ಚರ್ಚೆಯಲ್ಲಿ ಭಾಗವಹಿಸಿದರೆ ಕಾಂಗ್ರೆಸ್‍ಗೆ ಮೈನಸ್ ಆಗಲಿದೆ ಎಂಬ ರಾಜಕೀಯ ಲೆಕ್ಕಾಚಾರ, ಅವಕಾಶ ಕೊಟ್ಟರೆ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣಕ್ಕೆ ಉತ್ತರಿಸಿ ಪ್ರಚಾರಕ್ಕೆ ಬರುತ್ತಾರೆಂಬ ಕಾರಣಕ್ಕಾಗಿ ಡಿಕೆಶಿ ಅವರು ಮಾಡಿರುವ ತಂತ್ರ ಇದರ ಹಿಂದಿದೆ. ಇದರಿಂದಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ ಎಂದರು.
ಮಾರ್ಚ್ 27- 28ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಕೇಂದ್ರದ ಯೋಚನೆ ಮತ್ತು ಯೋಜನೆಗಳಿಗೆ ಕರ್ನಾಟಕದ ಕಾರ್ಯಕರ್ತರು ತಕ್ಷಣ ಸ್ಪಂದಿಸುತ್ತಿದ್ದಾರೆ.
ಕೇಂದ್ರದ ಸೂಚನೆಯಂತೆ ಪಾರ್ಟಿ ವಿಸ್ತರಣೆಗೊಂಡಿದೆ. ಅದರ ಆಧಾರದಲ್ಲಿ ಮತಗಟ್ಟೆ ಅಧ್ಯಕ್ಷರ ಆಯ್ಕೆ, ಪೇಜ್ ಪ್ರಮುಖರ ನೇಮಕ, ವಿಸ್ತಾರಕರ ಯೋಜನೆ ಅನುಷ್ಠಾನವೂ ಸಮರ್ಪಕವಾಗಿ ನಡೆಯುತ್ತಿದೆ ಎಂದರು.