ಬೆಂಗಳೂರು :ಕಾಂಗ್ರೆಸ್ ಪಕ್ಷದ ಸಂಘಟನೆ ಧೈರ್ಯವಾಗಿಸಿಕೊಂಡು ನಡೆಯುತ್ತಿರುವ ಸಂಕಲ್ಪ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರಿಂದ ಮತ್ತೊಮ್ಮೆ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
2018ರ ವಿಧಾನಸಭೆ ಚುನಾವಣೆ ನಂತರ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವುದು ಕಾಂಗ್ರೆಸ್ ಪ್ರಗತಿಗೆ ದೊಡ್ಡ ಮಟ್ಟದ ಸಮಸ್ಯೆ ತಂದಿಟ್ಟಿದೆ. ಹಿಂದಿನ ಮೈತ್ರಿ ತಂದಿಟ್ಟ ಸಮಸ್ಯೆ ಇಂದಿಗೂ ಪಕ್ಷದ ಪ್ರಗತಿಗೆ ಮುಳುವಾಗಿದೆ.
ಒಂದು ಸ್ವಲ್ಪ ಯೋಚಿಸಿ ಮೈತ್ರಿ ಮಾಡಿಕೊಳ್ಳದಿದ್ರೆ ಇಂದು ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್ ಕೈಯಲ್ಲಿದ್ದ ಅಧಿಕಾರವನ್ನುನಾವು ಅನಾಯಾಸವಾಗಿ ಬಿಜೆಪಿಗೆ ಕೊಟ್ಟಂತಾಗಿದೆ ಎಂದು ಬೆಂಗಳೂರು ನಗರ ವ್ಯಾಪ್ತಿಯ ಬ್ಲಾಕ್ ಹಾಗೂ ವಿಭಾಗಮಟ್ಟದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷ ಸಂಘಟನೆಯನ್ನು ಪ್ರಮುಖವಾಗಿಟ್ಟುಕೊಂಡು ಕಾಂಗ್ರೆಸ್ ರಾಜ್ಯ ನಾಯಕರು ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡರು ಒಮ್ಮತದಿಂದ ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ. ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕಾಂಗ್ರೆಸ್ಗೆ ಪ್ರಮುಖ ಪ್ರತಿಸ್ಪರ್ಧಿ ಜೆಡಿಎಸ್.
ಇವರ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದಲೇ ಇಂದು ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಬೆಂಗಳೂರು ಗ್ರಾಮಾಂತರ ಸೇರಿ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ. ಜೆಡಿಎಸ್ನಿಂದ ನಾವು ಆಚೆ ಬಂದ ನಂತರವೇ ಒಂದಿಷ್ಟು ಪಕ್ಷಕ್ಕೆ ಬಲ ಬಂದಿದೆ.
ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಹಾಗೂ ಪಕ್ಷದ ತಳಮಟ್ಟದ ನಾಯಕರನ್ನು ನಿರ್ಲಕ್ಷಿಸಿ ಯಾವುದೇ ತೀರ್ಮಾನ ಕೈಗೊಳ್ಳಬೇಡಿ ಎಂದು ಸಮಾವೇಶದಲ್ಲಿ ಮುಖಂಡರು ವಿನಂತಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಪ್ರಮುಖ ರಾಜ್ಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಮುಖಂಡರು ತಮ್ಮ ಮನಸ್ಸಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಡಿಕೆಶಿ ಹಾಗೂ ಸಿದ್ದರಾಮಯ್ಯನವರು, ನಾವು ಕೈಗೊಂಡ ನಿರ್ಧಾರದಿಂದಾದ ನಷ್ಟದ ಮನವರಿಕೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ವಿವೇಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಪಕ್ಷವನ್ನ ಮಾಸ್ ಬೇಸ್‌ನಿಂದ ಕೇಡರ್ ಬೇಸ್‌ಗೆ ಸಂಘಟಿಸಲು ಮುಂದಾಗಿದ್ದೇವೆ. 2023ರ ಚುನಾವಣೆ ವೇಳೆಗೆ ಪಕ್ಷ ಇನ್ನಷ್ಟು ಬಲಿಷ್ಠ ಆಗಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಅಗತ್ಯ ಸಲಹೆ ನೀಡಬೇಕು ಎಂದು ಕೇಳಿಕೊಂಡರು.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ್ರೆ ಜೆಡಿಎಸ್ ಪಕ್ಷವನ್ನು ದೂರ ಇಡಬೇಕು. ನಮ್ಮ ಪಾಲಿಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಿಜೆಪಿ ಯಾವ ರೀತಿ ಪ್ರತಿಸ್ಪರ್ಧಿಯ ಅದೇ ರೀತಿ ಜೆಡಿಎಸ್ ಕೂಡ ಎಂದು ಪರಿಗಣಿಸಬೇಕು. ಯಾವ ಕಾರಣಕ್ಕೂ ಜೆಡಿಎಸ್ ಪಕ್ಷವನ್ನು ನಿರ್ಲಕ್ಷಿಸದೆ, ಅವರ ಸಾಮರ್ಥ್ಯ ಬೆಳೆಸದೆ ನಮ್ಮ ಸಾಮರ್ಥ್ಯ ಅರಿತು ಪಕ್ಷ ಸಂಘಟಿಸಬೇಕು. ಆಗ ಮಾತ್ರ ಇನ್ನೊಮ್ಮೆ ನಾವು ಅಧಿಕಾರಕ್ಕೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ರೀತಿ ಜೆಡಿಎಸ್ ಸಖ್ಯದಿಂದ ಹೊರ ಬಂದ ನಂತರವೇ ಕಾಂಗ್ರೆಸ್ ಪಕ್ಷಕ್ಕೆ ಅದರಿಂದಾದ ನಷ್ಟದ ಅರಿವಾಗಿದೆ. ಇಂದು ಕಾರ್ಯಕರ್ತರೇ ನಾಯಕರು ಇದನ್ನ ಮನವರಿಕೆ ಮಾಡಿದ್ದಾರೆ.