ಬೆಂಗಳೂರು: ಬೆಳಗ್ಗೆಯಿಂದ ಆರಂಭವಾದ ಕಾಂಗ್ರೆಸ್ ರೋಡ್ ಶೋ ರಾತ್ರಿಯವರೆಗೂ ಮುಂದುವರೆದಿತ್ತು. ಬೆಳಗ್ಗೆ ಜಾಲಹಳ್ಳಿ ವಾರ್ಡ್ನಿಂದ ಆರಂಭಗೊಡ ಪ್ರಚಾರ ಕಾರ್ಯ ಹೆಚ್ಎಂಟಿ ವಾರ್ಡ್, ಎಸ್ಆರ್ಎಸ್ ಕಾಂಗ್ರೆಸ್ ಕಚೇರಿ ಹತ್ತಿರ ಬಹಿರಂಗ ಸಭೆ, ಗೊರಗುಂಟೆಪಾಳ್ಯ ಜೈ ಭುವನೇಶ್ವರಿ ನಗರ ಲಗ್ಗೆರೆ ಕೊಟ್ಟಿಗೆಪಾಳ್ಯ, ಜ್ಞಾನಭಾರತಿ ವಾರ್ಡ್ ಬಳಿಕ ಆರ್ಆರ್ ನಗರದಲ್ಲಿ ಕೊನೆಗೊಂಡಿತು.
ರೋಡ್ ಶೋನಲ್ಲಿ ಅಭ್ಯರ್ಥಿ ಕುಸುಮ ಪರ ಮಾಜಿ ಸಿಎಂ ಸಿದ್ದರಾಮಯ್ಯ ಮತಯಾಚಿಸಿದ್ದು, ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಥ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ಕ್ಷೇತ್ರದ ಜನತೆ ಮುನಿರತ್ನ ಅವರನ್ನು ಎರಡು ಬಾರಿ ಆಯ್ಕೆ ಮಾಡಿದರೇ ಹೊರತು ಅವರು ದೊಡ್ಡ ನಾಯಕರು ಎಂದಲ್ಲ ಎಂದರು.
ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತೆ ಎಂದರು.
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ನನ್ನ ತಾಯಿ ಅಂತ ಹೇಳ್ತಿದ್ದ ಮುನಿರತ್ನ ಅದೇ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ರು. ನಾವು ಯಾಕಪ್ಪಾ ಪಕ್ಷನ ತಾಯಿ ಅಂತ ಕರೀತಿದ್ದಿ, ಈಗ ಅದೇ ತಾಯಿಗೆ ಮೋಸ ಮಾಡಿದ್ಯಲ ಅಂದ್ರೆ ಕಾಂಗ್ರೆಸ್ ನಾಯಕರು ನನ್ನ ತಾಯಿಗೆ ಅವಮಾನ ಮಾಡ್ತಿದಾರೆಂದು ಗೊಳೋ ಅಂತ ಮೊಸಳೆ ಕಣ್ಣೀರು ಸುರಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.