ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರ ದುರಾಡಳಿತ ಮತ್ತು ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಆಡಳಿತ ಕೊಟ್ಟಿದ್ದು, ಬಿಟ್ಟರೆ ಶೂನ್ಯ ಸಾಧನೆ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸದಲ್ಲಿ ‘ಜನಪೀಡಕ ಸರ್ಕಾರ’ ಎಂಬ ಸರ್ಕಾರದ ವೈಫಲ್ಯದ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ಮೊನ್ನೆ ಬಿ.ಎಸ್. ಯಡಿಯೂರಪ್ಪ 2 ವರ್ಷ ಸರ್ಕಾರ ನಡೆಸಿದೆ ಎಂದು ಸಂಭ್ರಮದ ದಿನ ಆಚರಿಸಿ ರಾಜೀನಾಮೆ ನೀಡಿದರು. ರಾಜ್ಯವನ್ನು ಸಂಕಷ್ಟದ ದಿನದಲ್ಲೂ ಅಭಿವೃದ್ಧಿಗೆ ಕೊಂಡೊಯ್ದಿದ್ದೇವೆ ಅಂತೆಲ್ಲಾ ಹೇಳಿದರು. ಇದೀಗ ನಿರ್ಗಮಿಸಿದ್ದಾರೆ. ಹೊಸದಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದರು.
ಮೊಟ್ಟೆಯಲ್ಲೂ ಹಣ ಹೊಡೆದ ಸರ್ಕಾರವಿದು..
2019 ಜುಲೈನಲ್ಲಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡು 2 ವರ್ಷದ ನಂತರ ಅದೇ ತಿಂಗಳು ಸಿಎಂ ರಾಜೀನಾಮೆ ನೀಡಿದ್ದಾರೆ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದರು. 2018ರಲ್ಲಿ ಯಾರಿಗೂ ಬಹುಮತ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ದೊಡ್ಡ ಪಕ್ಷ ಆಗಿದ್ದಕ್ಕೆ ಬಿ.ಎಸ್ ಯಡಿಯೂರಪ್ಪಗೆ ಸರ್ಕಾರ ರಚಿಸುವ ಅವಕಾಶ ಬಂತು. ಅವರು ವಿಫಲವಾದಾಗ ಮೈತ್ರಿ ಸರ್ಕಾರ ಬಂತು. ಅದನ್ನು ಬೀಳಿಸಿ ಮತ್ತೆ ಯಡಿಯೂರಪ್ಪ ವಾಮ ಮಾರ್ಗದಲ್ಲಿ ಅನೈತಿಕ ಸರ್ಕಾರ ರಚಿಸಿದರು ಎಂದು ವಾಗ್ದಾಳಿ ನಡೆಸಿದರು.
ಮಕ್ಕಳಿಗೆ, ಗರ್ಭಿಣಿಯರಿಗೆ ನೀಡುವ ಮೊಟ್ಟೆಯಲ್ಲೂ ಹಣ ಹೊಡೆದ ಸರ್ಕಾರವಿದು. ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಕೊರೊನಾ ಸಲಕರಣೆ ಖರೀದಿಯಲ್ಲೂ ಅಕ್ರಮ ಎಸಗಿದ್ದಾರೆ. ಎಷ್ಟೋ ಸಲಕರಣೆ ಬಳಸಲಿಕ್ಕಾಗಲಿಲ್ಲ. 909 ವೆಂಟಿಲೇಟರ್ ಬಳಸಲೇ ಇಲ್ಲ. ನೂರಾರು ಕೋಟಿ ರೂ. ಬಿಲ್ ಮಾಡಿದರು. ದಾಖಲೆ ಸಮೇತ ನಾವು ಸರ್ಕಾರದ ಭ್ರಷ್ಟಾಚಾರವನ್ನು ಗಮನಕ್ಕೆ ತಂದೆವು. ಯಡಿಯೂರಪ್ಪ ಉತ್ತರಿಸಲೇ ಇಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
2ನೇ ಅಲೆ ಮುನ್ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡಲಾಯಿತು. ಸಿದ್ಧತೆ ಮಾಡಿಕೊಳ್ಳದೇ ಸರ್ಕಾರ ವಿಫಲವಾಯಿತು. ಕೊರತೆಗಳೇ ಹೆಚ್ಚಾದವು. ಬೆಡ್ ಸಿಗದೇ ಸಾವಿರಾರು ಜನ ಮೃತಪಟ್ಟರು. ಸಿದ್ಧತೆ ಮಾಡಿಕೊಂಡಿದ್ದರೆ ಇಷ್ಟೊಂದು ಜನ ಸಾಯುತ್ತಿರಲಿಲ್ಲ. ಇಲ್ಲಿ ಸುಧಾಕರ್ ಹೇಳಿದಂತೆ ಕೇಂದ್ರ ಆರೋಗ್ಯ ಸಚಿವರೂ ಸುಳ್ಳು ಹೇಳಿದ್ದಾರೆ. ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ಕಾರ್ಮಿಕರು ಬೀದಿಗೆ ಬಂದರು ಎಂದಿದ್ದಾರೆ.