ಬೆಂಗಳೂರು:ರಾಯಪುರ ಅಧಿವೇಶನವು ಕಾಂಗ್ರೆಸ್ ಪಕ್ಷಕ್ಕೆ ಹೊಸ ದಿಕ್ಕು ಕೊಡುತ್ತಿದೆ. ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೇಗೆ ಮುನ್ನಡೆಯಬೇಕು. 2024ರ ಚುನಾವಣೆಗೆ ಹೇಗೆ ತಯಾರಿ ಆಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ರಾಯಪುರ ಕಾಂಗ್ರೆಸ್ ಮಹಾಧಿವೇಶನ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆ ವೇಳೆ ತೆಗೆದುಕೊಂಡ ತೀರ್ಮಾನ ಅನುಷ್ಠಾನ ಮಾಡುವುದರ ಕಾಂಗ್ರೆಸ್ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಆದರೆ, ಕರ್ನಾಟಕದ ವಿಚಾರ ಚರ್ಚೆ ಆಗಿಲ್ಲ. ರಾಷ್ಟ್ರದ ಪಾಲಿಸಿ ಹೇಗಿರಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆದಿದೆ. ಹೈಕಮಾಂಡ್ ನಾಯಕರು ರಾಜ್ಯ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಮೂರ್ನಾಲ್ಕು ದಿನದಲ್ಲಿ ಯಾರು ಬರುತ್ತಾರೆಂಬ ಬಗ್ಗೆ ತಿಳಿಸುತ್ತೇವೆ ಎಂದರು.
ರಾಜ್ಯದಲ್ಲಿ ಮುಂದೆ ನಾವು ಆಡಳಿತ ಮಾಡಲಿದ್ದೇವೆ. ಹಾಗಾಗಿ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ ಬಂದು ಆಡಳಿತ ಮಾಡುವುದಿಲ್ಲ. ಮೋದಿ, ಅಮಿತ್ ಶಾ ಪಂಚಾಯಿತಿ, ತಾಲೂಕು, ಜಿಲ್ಲೆಗಳಿಗೆ ಪ್ರಚಾರಕ್ಕೆ ಬಂದು ಹೋಗಲಿ. ಡಬಲ್ ಇಂಜಿನ್ ಇದೆ, ಎಲ್ಲಿ ಬೇಕಾದರೂ ಗಾಡಿ ಓಡಿಸಲಿ ಎಂದು ಪದೇ ಪದೆ ಮೋದಿ, ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು.
ಶಾಸಕ ಜಮೀರ್ ಅಹಮದ್ ಸ್ಪಷ್ಟನೆ :ಚಾಮರಾಜಪೇಟೆಯಲ್ಲಿ ವಿದೇಶಿ ಕರೆನ್ಸಿ ಹಂಚಿದ ವಿಚಾರವಾಗಿ ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಮಾತನಾಡಿದ್ದು, ಆಶಾ ಕಾರ್ಯಕರ್ತೆಯರು ಉಮ್ರಾಗೆ ಹೋಗುತ್ತಿದ್ದರು. ಅವರಿಗೆ ತಲಾ 12 ಸಾವಿರ ನೀಡಿದ್ದೇನೆ. ಸೌದಿಯಲ್ಲಿ 500 ರಿಯಲ್ ಆಗುತ್ತೆ. ಅಲ್ಲಿ ಹೋಗಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ. ನೋಟು ಹಂಚಿದ್ದು, ಕಾನೂನು ತೊಡಕು ಏನು ಆಗಲ್ಲ. ನಾನು ಅದರ ವಿವರಣೆ ಕೊಟ್ಟು ಕಳುಹಿಸಿದ್ದೇನೆ ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.