ಬೆಂಗಳೂರು: ದುರಾಡಳಿತ ಹಗರಣದ ಮೂಲಕ ಇಂಧನ ಇಲಾಖೆಯನ್ನು ನಷ್ಟಕ್ಕೆ ದೂಡಿದ್ದೇ ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವ ಸಾಧನೆಯಾಗಿದೆ. ಇಲಾಖೆಯನ್ನು ದೊಡ್ಡ ಪ್ರಮಾಣದಲ್ಲಿ ಹಳ್ಳ ಹಿಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಜೋಡಿ, ಮುಂದಿನ ಚುನಾವಣೆಗಾಗಿ ಮಾತ್ರ ಈಗ ಉಚಿತ ವಿದ್ಯುತ್ ಎಂಬ ಸುಳ್ಳು ಭರವಸೆ ನೀಡುತ್ತಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ತಮ್ಮ ಟ್ವೀಟ್ ಖಾತೆಯಲ್ಲಿ ಆರೋಪಿಸಿರುವ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ರೈತರ ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕ ನೀಡದೇ ಸತಾಯಿಸಿದವರು. ಈಗ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಡಂಗುರ ಸಾರುತ್ತಿದ್ದು, ಈ ಶತಮಾನದ ಅತಿದೊಡ್ಡ ಸುಳ್ಳಾಗಬಹುದು. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎಲ್ಲ ಎಸ್ಕಾಂಗಳನ್ನು ದಿವಾಳಿ ಅಂಚಿಗೆ ತಳ್ಳಿದ್ದ ಮಹಾನ್ ಆರ್ಥಿಕ ತಜ್ಞರೊಬ್ಬರು ಈಗ 200 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಇದು ಜನಹಿತದ ಹೇಳಿಕೆಯಲ್ಲ. ಎಸ್ಕಾಂಗಳನ್ನು ಖಾಸಗಿಕರಣಗೊಳಿಸುವುದೇ ಈ ಸುಳ್ಳು ಭರವಸೆಯ ಹಿಂದಿರುವ ಉದ್ದೇಶ ಎಂದು ಆರೋಪಿಸಿದ್ದಾರೆ.
ಖಾಸಗೀಕರಣ ಹುನ್ನಾರ: ಎಸ್ಕಾಂಗಳನ್ನು ಖಾಸಗೀಕರಣ ಮಾಡುವುದೇ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಅಂತಿಮ ಗುರಿ. ಉಚಿತ ವಿದ್ಯುತ್ ನಿಂದ ಎಸ್ಕಾಂಗಳ ಮೇಲೆ ಇನ್ನಷ್ಟು ಹೊರೆಯಾಗುತ್ತದೆ. ಆಗ ನಷ್ಟದಲ್ಲಿರುವ ಎಸ್ಕಾಂಗಳನ್ನು ಖಾಸಗೀಕರಣ ಮಾಡುವ ಸಂಚು ಈ ಘೋಷಣೆಯ ಹಿಂದೆ ಇದೆ. ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಕತ್ತಲೆಯಲ್ಲಿ ಬಜೆಟ್ ಓದಿದ್ದನ್ನು ಸಿದ್ದರಾಮಯ್ಯ ಮರೆತಿರಬೇಕು. ನೀವು ಅಧಿಕಾರದಲ್ಲಿದ್ದ ವೇಳೆ ಎಸ್ಕಾಂಗಳನ್ನು ನಷ್ಟಕ್ಕೆ ದೂಡಿದ್ದಿರಿ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 9000 ಕೋಟಿ ರೂ ಎಸ್ಕಾಂಗಳಿಗೆ ನೀಡಿ, ನೀವು ಮಾಡಿದ್ದ ಆಡಳಿತ ವೈಫಲ್ಯ ಸರಿಪಡಿಸಿದ್ದೇವೆ. ಮತಕ್ಕಾಗಿ ಇಂಧನ ಇಲಾಖೆ ಮಾರಾಟ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.