ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪ್ರತಿಭಟನೆ: ಸದಸ್ಯರನ್ನು ಸಸ್ಪೆಂಡ್​​ ಮಾಡಿ ಎಂದ ರಮೇಶ್ ಕುಮಾರ್, ಗರಂ ಆದ ಸ್ಪೀಕರ್, ಸಿಎಂ! - Congress protests in Assembly Continued

ಕಾಂಗ್ರೆಸ್ ಸದಸ್ಯರು ಇಂದೂ ಸಹ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಧರಣಿಗೆ ಗರಂ ಆದ ಸ್ಪೀಕರ್ ಕಾಗೇರಿ, ಚರ್ಚೆಯಲ್ಲಿ ಭಾಗವಹಿಸಿ, ಧರಣಿ ಕೈಬಿಡಿ. ಕಲಾಪಕ್ಕೆ ಅಡ್ಡಿ ಮಾಡೋದು ಸರಿಯಾದ ಕ್ರಮ ಅಲ್ಲ ಎಂದು ಮನವಿ ಮಾಡಿದರು. ನಂತರ ರಮೇಶ್ ಕುಮಾರ್ ಸಸ್ಪೆಂಡ್ ಮಾಡಿ ಎಂದು ಸವಾಲು ಹಾಕಿದರು. ಬಳಿಕ ಮಾತನಾಡಿದ ಸಿಎಂ ವಿಪಕ್ಷ ತನ್ನ ಜವಾಬ್ದಾರಿ ಮರೆತಿದೆ. ನೋವಿನಿಂದ ಹೇಳ್ತಿದ್ದೇನೆ ವಿಪಕ್ಷ ಜನಪರ ಧ್ವನಿ ಎತ್ತಬೇಕಿತ್ತು. ರಾಜಕೀಯ ಧರಣಿ ಮಾಡುವುದು ಅವರ ರಾಜಕೀಯ ದಿವಾಳಿತನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Congress protests in Assembly
ಸಿಎಂ

By

Published : Feb 18, 2022, 3:02 PM IST

Updated : Feb 18, 2022, 4:59 PM IST

ಬೆಂಗಳೂರು: ಸಚಿವ ಕೆ. ಎಸ್. ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಇಂದೂ ಸಹ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ ಮುಂದುವರೆದಿದ್ದು, ಗದ್ದಲ ಉಂಟಾಗಿದ್ದರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.

ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು, ಈಶ್ವರಪ್ಪ ರಾಜೀನಾಮೆಗೆ ಪಟ್ಟುಹಿಡಿದು ಧಿಕ್ಕಾರ ಕೂಗಿದರು. ಪೀಠಕ್ಕೆ ಬಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನಿನ್ನೆ ನಿಧನರಾದ ಮಾಜಿ ಸಚಿವ ಜಿ.ವಿ. ಮಂಟೂರ ಅವರಿಗೆ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು. ಆಗ ಎಲ್ಲಾ ಸದಸ್ಯರು ನಿಶಬ್ದರಾದರು.

ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಸಂತಾಪ ಸೂಚನೆ ನಿರ್ಣಯ ಮುಗಿಯುತ್ತಿದ್ದಂತೆ ಸ್ಪೀಕರ್ ಕಾಗೇರಿಯವರು, ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು. ಆಗಲೂ ಸಹ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ರಾಜಿನಾಮೆಗೆ ಒತ್ತಾಯಿಸಿ ಘೋಷಣೆ ಕೂಗುತ್ತಲೇ ಇದ್ದರು.

ಕಾಂಗ್ರೆಸ್ ಧರಣಿಗೆ ಆಕ್ಷೇಪ: ಕಾನೂನು ಸಚಿವ ಮಾಧುಸ್ವಾಮಿ ಅವರು ಕಾಂಗ್ರೆಸ್ ಧರಣಿಗೆ ಆಕ್ಷೇಪ ವ್ಯಕ್ತಪಡಿಸಿ, ಕಲಾಪದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಈ ವ್ಯವಸ್ಥೆಗೆ ಅಪಹಾಸ್ಯ ಮಾಡುವ ಕೆಲಸ ಇದು. ಕಾಂಗ್ರೆಸ್ ಧರಣಿ ದುರಾದೃಷ್ಟಕರ ಎಂದರು.

ಸ್ಪೀಕರ್ ರೂಲಿಂಗ್ ಕೊಟ್ಟು ನಿಲುವಳಿ ಸೂಚನೆ ನಿರಾಕರಿಸಿದ್ದಾರೆ. ಯಾರಿಗೂ ಮಾತನಾಡಲು ಅವಕಾಶ ಸಿಕ್ತಿಲ್ಲ. ಚರ್ಚೆ ಮಾಡಲು ಧರಣಿ ಅಡ್ಡಿಯಾಗಿದೆ. ಧರಣಿ ಅಂತ್ಯ ಮಾಡಿ ಚರ್ಚೆಗೆ ಅವಕಾಶ ಕೊಡಲಿ ಎಂದು ಹೇಳಿದರು.

ಸ್ಪೀಕರ್ ಆಕ್ರೋಶ: ಕಾಂಗ್ರೆಸ್ ಧರಣಿಗೆ ಗರಂ ಆದ ಸ್ಪೀಕರ್ ಕಾಗೇರಿ, ಚರ್ಚೆಯಲ್ಲಿ ಭಾಗವಹಿಸಿ, ಧರಣಿ ಕೈಬಿಡಿ. ಕಲಾಪಕ್ಕೆ ಅಡ್ಡಿ ಮಾಡೋದು ಸರಿಯಾದ ಕ್ರಮ ಅಲ್ಲ ಎಂದು ಮನವಿ ಮಾಡಿದರು. ನಿಮ್ಮ ಪ್ರತಿಭಟನೆಯನ್ನ ಹೊರಗಡೆ ಮಾಡಿ. ಇಲ್ಲಿ ಪ್ರತಿಭಟನೆ ಮಾಡಿ ಸಮಯ ವ್ಯರ್ಥ ಮಾಡಬೇಡಿ. ರಾಜ್ಯದ ವಿಚಾರಗಳ ಬಗ್ಗೆ ಚರ್ಚೆ ಮಾಡಲಿ ಎಂದರು.

ರಮೇಶ್ ಕುಮಾರ್ ಸವಾಲು: ಸಸ್ಪೆಂಡ್ ಮಾಡಲು ನಿಮಗೆ ಅವಕಾಶ ಇದೆ. ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನೀವು ಬೇಕಾದರೆ ಸಸ್ಪೆಂಡ್ ಮಾಡಿ ಎಂದು ರಮೇಶ್ ಕುಮಾರ್ ಸವಾಲು ಹಾಕಿದರು. ಶಾಂತಿಯಿಂದ ವರ್ತಿಸುವಂತೆ ಸೂಚನೆ ನೀಡಿದ ಸ್ಪೀಕರ್, ಇತರ ಸದಸ್ಯರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಮಧ್ಯಪ್ರವೇಶ ಮಾಡಿದ ಶಾಸಕ ರಮೇಶ್ ಕುಮಾರ್. ನಿಮಗೆ ಅಧಿಕಾರ ಇದೆ. ಪ್ರತಿಭಟನಾ ನಿರತರನ್ನು ಸಸ್ಪೆಂಡ್ ಮಾಡಬಹುದು ಅಂತ ಸಲಹೆ ನೀಡಿದರು. ಶಾಸಕ ರಮೇಶ್ ಕುಮಾರ್ ಮಾತಿಗೆ ಧ್ವನಿಗೂಡಿಸಿದ ಜೆಡಿಎಸ್‍ ಹಿರಿಯ ಶಾಸಕ ಹೆಚ್.ಡಿ.ರೇವಣ್ಣ ಸಸ್ಪೆಂಡ್​ ಮಾಡುವಂತೆ ಸಲಹೆ ನೀಡಿದರು.

ರಮೇಶ್ ಕುಮಾರ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ಈ ರೀತಿ ಬಯಸುವುದು ಸರಿಯಲ್ಲ. ನಾನು ಹೇಳುವುದು ಸರಿಯಲ್ಲ ಎಂದರು. ನೀವು ಬರೆದುಕೊಡಿ ಸಸ್ಪೆಂಡ್​ ಮಾಡಿ ಅಂತ ಎಂದು ಸ್ಪೀಕರ್ ಹೇಳಿದರು. ಒಂದು ಹಂತದಲ್ಲಿ ಸ್ಪೀಕರ್ ಮತ್ತು ರಮೇಶ್ ಕುಮಾರ್ ನಡುವೆ ಜಟಾಪಟಿ ನಡೆಯಿತು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ಅಲ್ಲ. ಕಾಂಗ್ರೆಸ್ ಪಕ್ಷಕ್ಕೂ ಇದು ಶೋಭೆ ಅಲ್ಲ. ಹೊರಗಡೆ ಏನಾದರೂ ಮಾಡಿ, ಕಲಾಪ ನಡೆಸಲು‌ ಅವಕಾಶ ಕೊಡಿ ಎಂದು ಮಾಧುಸ್ವಾಮಿ ಕೇಳಿಕೊಂಡರು.

ಇಂತಹ ಸನ್ನಿವೇಶ ಇತಿಹಾಸದಲ್ಲೇ ನೋಡಿಲ್ಲ:ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದು ಈ ರೀತಿ ಸನ್ನಿವೇಶವನ್ನು ಇತಿಹಾಸದಲ್ಲಿ ನೋಡಿಲ್ಲ. ಅನೇಕ ಬಾರಿ ಧರಣಿಯಾಗಿದೆ. ಧರಣಿಯಲ್ಲಿ ಜನರ ಮತ್ತು ರಾಜ್ಯದ ಹಿತ ಇಲ್ಲ. ರೈತರು, ಕೂಲಿ, ಕಾರ್ಮಿಕರ ವಿಷಯವಿಟ್ಟುಕೊಂಡು ಧರಣಿಯಾಗಿದೆ. ಅದಕ್ಕೆ ಫಲ ಕೂಡ ಸಿಕ್ಕಿದೆ. ಈ ಧರಣಿಯಲ್ಲಿ ಯಾವುದೇ ಜನಹಿತವಿಲ್ಲ, ವಿಪಕ್ಷ ತನ್ನ ಜವಾಬ್ದಾರಿ ಮರೆತಿದೆ. ನೋವಿನಿಂದ ಹೇಳ್ತಿದ್ದೇನೆ ವಿಪಕ್ಷ ಜನಪರ ಧ್ವನಿ ಎತ್ತಬೇಕಿತ್ತು. ರಾಜಕೀಯ ಧರಣಿ ಮಾಡುವುದು ಅವರ ರಾಜಕೀಯ ದಿವಾಳಿತನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ಸದಸ್ಯರ ವರ್ತನೆಯಿಂದ ಎಲ್ಲಾ ಸದಸ್ಯರ ಅವಕಾಶ ಮೊಟಕಾಗುತ್ತಿದೆ. ಜೆಡಿಎಸ್‍ ಶಾಸಕರು ಮಾತನಾಡಬೇಕು ಅಂತ ಇದ್ದಾರೆ. ಶಾಸಕರು ಕೂಡ ಧ್ವನಿ ಎತ್ತಬೇಕು ಎಂದಿದ್ದಾರೆ. ಇದರಿಂದ ಯಾವ ಲಾಭ ಕೂಡ ಇಲ್ಲ. ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಗೊಂದಲ ನಡೆಯುತ್ತಿದೆ ಎಂದರು.

ಇದನ್ನೂ ಓದಿ:ತಹಬದಿಗೆ ಬಾರದ ವಿಧಾನಸಭೆ ಕಲಾಪ ; ಸದನವನ್ನು ಸೋಮವಾರಕ್ಕೆ ಮುಂದೂಡಿದ ಸ್ಪೀಕರ್

ಹಿಜಾಬ್ ವಿಚಾರ ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ‌, ಮಕ್ಕಳಲ್ಲಿರುವ ಗೊಂದಲ ದೂರಮಾಡಿ. ಮಕ್ಕಳ ಭವಿಷ್ಯ ನಿರ್ಮಿಸಬೇಕು. ಆದರೆ, ಇವರು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದ್ದಾರೆ. ಎಲ್ಲರೂ ಸೇರಿ ಗೊಂದಲಕ್ಕೆ ಪರಿಹಾರ ಕೊಡಬೇಕು. ಎಲ್ಲರೂ ಮಕ್ಕಳಿಗೆ ಒಂದು ಸಂದೇಶ ಕೊಡಬೇಕು, ಇಡೀ ಭಾರತ ನೋಡುವ ಸಂದರ್ಭದಲ್ಲಿ ವಿಚಾರ ಡೈವರ್ಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಪೀಕರ್ ಕುರ್ಚಿಗೂ ಇವರು ಗೌರವ ನೀಡುತ್ತಿಲ್ಲ. ಸಂವಿಧಾನಕ್ಕೂ ದ್ರೋಹ ಬಗೆಯುತ್ತಿದ್ದಾರೆ. ರಾಜ್ಯದ ಜನತೆಗೆ, ಮಕ್ಕಳಿಗೆ ದ್ರೋಹ ವೆಸಗುತ್ತಿದ್ದಾರೆ ಎಂದು ಕಿಡಿಕಾರಿದರು. ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸ್ತೇನೆ ಅಂತ ಈಶ್ವರಪ್ಪ ಎಲ್ಲೂ ಹೇಳಿಲ್ಲ. ಇದು ಕಾಂಗ್ರೆಸ್​ನವರ ಸೃಷ್ಟಿ ಎಂದು ಹೇಳಿದರು.

ನಂತರ ಸ್ಪೀಕರ್ ಮಾತನಾಡಿ, ಸಸ್ಪೆಂಡ್ ಮಾಡಿ ಅಂತ ರಮೇಶ್ ಕುಮಾರ್ ಸಲಹೆ ಕೊಟ್ಟಿದ್ದು, ಅವರು ಇದನ್ನು ಬರೆದುಕೊಡಲಿ. ಸಿದ್ದರಾಮಯ್ಯ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ. ಅಂತಹವರನ್ನು ಸಸ್ಪೆಂಡ್ ಮಾಡಿ‌ ಅಂತ ರಮೇಶ್ ಕುಮಾರ್ ಸಲಹೆ ಕೊಡ್ತಿದಾರೆ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಸದಸ್ಯರು ಮನವಿಗೆ ಮಣಿಯದಿದ್ದಾಗ ಸ್ಪೀಕರ್​ ಕಾಗೇರಿಯವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

Last Updated : Feb 18, 2022, 4:59 PM IST

For All Latest Updates

TAGGED:

ABOUT THE AUTHOR

...view details