ಬೆಂಗಳೂರು: ಪೊಲೀಸ್ ಇನ್ಸ್ಪೆಕ್ಟರ್ ನಂದೀಶ್ ಸಾವಿನ ಪ್ರಕರಣದಲ್ಲಿ ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಯುವ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 40% ಭ್ರಷ್ಟ ಬಿಜೆಪಿ ಸರ್ಕಾರ ನಿರಂತರವಾಗಿ ಹಗಲು ದರೋಡೆ ನಡೆಸುತ್ತಿದೆ ಎಂಬುದಕ್ಕೆ ನಂದೀಶ್ ಸಾವಿನ ಪ್ರಕರಣವೇ ಸಾಕ್ಷಿಯಾಗಿದೆ. ಸಚಿವ ಎಂಟಿಬಿ ನಾಗರಾಜ್ ಅವರು ನೀಡಿರುವ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಂದೀಶ್ ಅವರ ಹೃದಯಾಘಾತ ಪ್ರಕರಣದಲ್ಲಿ ಸರ್ಕಾರದ ಹಾಗೂ ಗೃಹ ಇಲಾಖೆಯ ಒತ್ತಡ ಇರುವುದು ಬಹಿರಂಗಗೊಂಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಅವರು ಮಾತನಾಡಿದರು ಸರ್ಕಾರದ ದುರಾಡಳಿತವೇ ಕಾರಣ:70 ರಿಂದ 80 ಲಕ್ಷ ಹಣ ನೀಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಅವರಿಗೆ ಎಷ್ಟು ಒತ್ತಡ ಇದೆ ಎಂಬುದು ಇಂದು ರಾಜ್ಯದ ಜನತೆಗೆ ತಿಳಿಯುತ್ತಿದೆ. ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಇಷ್ಟು ಮೊತ್ತದ ಹಣ ನೀಡಿ ಕರ್ತವ್ಯ ನಿರ್ವಹಿಸಬೇಕಾದ ಅತ್ಯಂತ ದುಷ್ಟ ಪರಿಸ್ಥಿತಿ ಇಂದು ರಾಜ್ಯದಲ್ಲಿ ನಿರ್ಮಾಣವಾಗಿದೆ. ಅದಕ್ಕೆ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತವೇ ಮೂಲ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಇಲಾಖೆಯಲ್ಲೂ ಸಹ ಬಿಜೆಪಿ ಭ್ರಷ್ಟ ಸರ್ಕಾರ ಹಗಲು ದರೋಡೆ ನಡೆಸಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಪೊಲೀಸ್ ಇನ್ಸ್ಪೆಕ್ಟರ್ ಸಾವಿನ ಬಗ್ಗೆ ಅವರ ಕುಟುಂಬದವರೇ ಬಹಿರಂಗಪಡಿಸಿದ್ದಾರೆ. ಅವರಿಗೆ ಹೆಚ್ಚು ಒತ್ತಡವಿತ್ತು. ಅದಕ್ಕಾಗಿ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಸಚಿವರೇ ಬಹಿರಂಗಪಡಿಸಿದ್ದರು. ಈ ಮೊಂಡು ಸರ್ಕಾರ ಕಿವಿ, ಕಣ್ಣು ಕಾಣಿಸದೆ ಕೇಳಿಸದ ರೀತಿಯಲ್ಲಿ ವರ್ತಿಸುತ್ತಿದೆ. ಕೂಡಲೇ ಈ ಸರ್ಕಾರ ತೊಲಗದೆ ಹೋದರೆ ಯಾವ ಇಲಾಖೆಯಲ್ಲೂ ಸಹ ಪ್ರಾಮಾಣಿಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ ಎಂದು ಮನೋಹರ್ ಇದೇ ಸಂದರ್ಭ ಮಾಧ್ಯಮಗಳಿಗೆ ತಿಳಿಸಿದರು.
ನ್ಯಾಯಾಂಗ ತನಿಖೆಗೆ ವಹಿಸಬೇಕು: ನಂದೀಶ್ ಅವರ ಕುಟುಂಬಕ್ಕೆ ನ್ಯಾಯ ದೊರಕಬೇಕಾದರೆ ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ಅವರ ಸಾವಿಗೆ ಸರ್ಕಾರವೇ ನೇರ ಹೊಣೆ ಆಗಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಿ ತೊಲಗಬೇಕೆಂದು ಪ್ರತಿಭಟನೆ ಮೂಲಕ ಆಗ್ರಹಪಡಿಸಲಾಯಿತು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರುಗಳಾದ ಜಿ ಜನಾರ್ಧನ್, ಎ ಆನಂದ್ ಮತ್ತಿತರರು ಭಾಗವಹಿಸಿದ್ದರು.
ಓದಿ:ಕೆಆರ್ ಪುರ ಇನ್ಸ್ಪೆಕ್ಟರ್ ಸಾವು: ಪೊಲೀಸ್ ಆಯುಕ್ತರ ವಿರುದ್ಧ ಸಚಿವ ಎಂಟಿಬಿ ಗರಂ