ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಕೈ ನಾಯಕರು ಇಂದು ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡಿದರು.
ಬೆಂಗಳೂರಿನ ಕೋಡೆ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗದಿಂದ ಮೆರವಣಿಗೆ ಹೊರಟು ಆನಂದರಾವ್ ವೃತ್ತ ಸಮೀಪದ ಕಾಂಗ್ರೆಸ್ ಭವನ ತಲುಪಿದ ಕಾಂಗ್ರೆಸ್ ನಾಯಕರು ಅಲ್ಲಿಯೇ ಆಹಾರ ಸೇವನೆ ಮಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡಿದರು. ಕಾಂಗ್ರೆಸ್ ಮುಖಂಡರು ತಂದಿದ್ದ ಆಹಾರವನ್ನು ಸೇವಿಸಿದ ನಂತರ ಮಾತನಾಡಿದ ಡಿಕೆಶಿ, ಬೆಳಗ್ಗೆ ಉಪಹಾರ ಸೇವಿಸಿರಲಿಲ್ಲ. ಹೀಗಾಗಿ ಇಲ್ಲಿ ಬಂದು ಇಡ್ಲಿ ಸೇವಿಸಿದ್ದೇನೆ ಎಂದರು.
ಆಹಾರ ಸಿದ್ಧಪಡಿಸಿ ಸೇವಿಸಿದರು:ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತೆಯರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಜೊತೆ ಕಾಂಗ್ರೆಸ್ ಭವನದಲ್ಲಿಯೇ ವಿವಿಧ ಬಗೆಯ ಆಹಾರ ಸಿದ್ಧಪಡಿಸಿಕೊಂಡು ಸೇವಿಸಿದರು.
ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಹೆಚ್ಚಿಸಿರುವುದನ್ನು ಖಂಡಿಸಿ ಸ್ಥಳದಲ್ಲೇ ಅಡುಗೆ ಸಿದ್ಧಪಡಿಸಿ, ಇಡ್ಲಿ ಬೇಯಿಸಿ, ಪಲಾವ್ ಹಾಗೂ ಪೂರಿ ಬೇಯಿಸಿ ಸೇವಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಆಹಾರ ಸಿದ್ಧಪಡಿಸುವ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.