ಬೆಂಗಳೂರು: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕರಾದ ರಮೇಶ್ ಕುಮಾರ್, ರಾಮಲಿಂಗಾ ರೆಡ್ಡಿ, ರಿಜ್ವಾನ್ ಹರ್ಷದ್, ಸೌಮ್ಯಾ ರೆಡ್ಡಿ ಮಾಜಿ ಸಂಸದ ಉಗ್ರಪ್ಪ ಸೇರಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನೆ ವೇಳೆ ಮೊಟ್ಟೆ ಪ್ರದರ್ಶನ ಮಾಡಿ ತಮ್ಮ ನಾಯಕನಿಗೆ ಎಸೆದಿರುವ ವಿರುದ್ಧ ಕೈ ನಾಯಕರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. "ನೀವು ಸಿದ್ದರಾಮಯ್ಯಗೆ ಮೊಟ್ಟೆಯಿಂದ ಹೊಡೆದಿದ್ದೀರಿ. ಹೊಟ್ಟೆ ತುಂಬುವ ಅನ್ನಭಾಗ್ಯ ಕೊಟ್ಟದ್ದು ಸಿದ್ದರಾಮಯ್ಯ. ಅನ್ನಭಾಗ್ಯದಿಂದ ಮೊಟ್ಟೆ ಹೊಡೆಯುವಷ್ಟು ಶಕ್ತಿ ಬಂದಿದ್ದು ಸಂತೋಷ" ಎಂದು ಪೋಸ್ಟರ್ ಪ್ರದರ್ಶನ ಮಾಡಿದರು.
ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಹೇಗೆ ನೋಡಿಲ್ವೇ?: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡುತ್ತಾ, ಆರ್. ಎಸ್.ಎಸ್, ಬಿಜೆಪಿಯವರು ಗೋಡ್ಸೆ ಅಭಿಮಾನಿಗಳು. ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಹೇಗೆ ನೋಡಿಲ್ವೇ ಎಂದು ವಾಗ್ದಾಳಿ ನಡೆಸಿದರು.