ಬೆಂಗಳೂರು: ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯವು ನೋಟಿಸ್ ನೀಡಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನ ಇಡಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ನಗರದ ಲಾಲ್ ಬಾಗ್ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇಡಿ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು.
ಲಾಲ್ ಬಾಗ್ ಗೇಟ್ನಿಂದ ಶಾಂತಿನಗರದ ಟಿಡಿಎಂಸಿ ಬಳಿಯ ಇಡಿ ಕಚೇರಿಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ಶಾಸಕರಾದ ಹ್ಯಾರಿಸ್, ರಂಗನಾಥ್, ಎಂಎಲ್ಸಿ ಯು.ಬಿ. ವೆಂಕಟೇಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಪೊಲೀಸ್ ವಶಕ್ಕೆ:ಬಳಿಕ ಲಾಲ್ ಬಾಗ್ ಗೇಟ್ನಿಂದ ಶಾಂತಿನಗರದ ಟಿಟಿಎಂಸಿಯಲ್ಲಿನ ಇಡಿ ಕಚೇರಿಗೆ ಕೈ ಕಾರ್ಯಕರ್ತರ ಜೊತೆಗೂಡಿ ಕೈ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನೂರಾರು ಕಾರ್ಯಕರ್ತರು ಈ ವೇಳೆ ಸಾಥ್ ನೀಡಿದರು. ಬಿಜೆಪಿ ಶಾಂತಿನಗರ ಬಸ್ ನಿಲ್ದಾಣ ಸಿಗ್ನಲ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆ ಹಿಡಿದರು. ಈ ವೇಳೆ ಪೊಲೀಸರು ಮತ್ತು ಕೈ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.