ಬೆಂಗಳೂರು :ದೇಶದಲ್ಲೇ ಮೊದಲ ಬಾರಿ ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ಚರ್ಚೆಗೆ ಬೆಂಬಲ ನೀಡಿ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿಕೊಂಡರೂ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಸಡಿಲಿಸಲಿಲ್ಲ.
ಬಜೆಟ್ ಅಧಿವೇಶನದ ಎರಡನೇ ದಿನವಾದ ಇಂದೂ ಕಾಂಗ್ರೆಸ್ ಸದಸ್ಯರ ಧರಣಿ ಮುಂದುವರಿದಾಗ ಸಭಾಧ್ಯಕ್ಷರು ಈ ಮನವಿ ಮಾಡಿಕೊಂಡರು. ಬೆಳಗ್ಗೆ ಸದನವನ್ನು ಮುಂದೂಡಿ ಪುನಃ ಸದನ ಸೇರಿದಾಗ ಕಾಗೇರಿ ಅವರು, ಕಾಂಗ್ರೆಸ್ ಸದಸ್ಯರಿಗೆ ಪದೇ ಪದೆ ಮನವಿ ಮಾಡಿದರು.
ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ಬಾರಿ ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಇದರಲ್ಲಿ ಭಾಗವಹಿಸುವ ಮೂಲಕ ಸತ್ಸಂಪ್ರದಾಯವನ್ನು ಎತ್ತಿ ಹಿಡಿಯಿರಿ ಎಂದರು.
ಈ ದೇಶದಲ್ಲಿ ಹಲವು ಮಹತ್ವದ ಕೆಲಸಗಳಿಗೆ ಕರ್ನಾಟಕದಿಂದ ಚಾಲನೆ ದೊರೆತಿದೆ. ಈಗ ಪುನಃ ಅಂತಹ ಮತ್ತೊಂದು ಅವಕಾಶ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಹಕಾರ ಕೊಡಬೇಕು. ಒಂದು ವೇಳೆ ನಿಮ್ಮ ವಿರೋಧವಿದ್ದರೆ ಯಾವ ಕಾರಣಕ್ಕಾಗಿ ನಿಮ್ಮ ವಿರೋಧವಿದೆ ಎಂಬುದನ್ನಾದರೂ ಹೇಳಿ ಎಂದು ಕೇಳಿಕೊಂಡರು.
ಪ್ರಜಾಪ್ರಭುತ್ವವನ್ನು ಬಲಪಡಿಸುವ ವಿಷಯದಲ್ಲಿ ಕರ್ನಾಟಕದಿಂದಲೂ ಮಹತ್ವದ ಸಂದೇಶ ರವಾನೆಯಾಗಲಿ. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದು ಸರಿಯಾದ ಕ್ರಮವಲ್ಲ. ಡಿ.ಕೆ. ಶಿವಕುಮಾರ್ ಅವರೆ ನೀವೇ ಹೇಳಿ ನಿಮ್ಮ ಶಾಸಕರಿಗೆ ಚರ್ಚೆಗೆ ಅವಕಾಶ ಕೊಡಿ, ಇದಕ್ಕೆ ನಿಮ್ಮ ಸಹಕಾರವಿರಲಿ ಎಂದು ಕೋರಿದರು.
ಆದರೆ ಸಭಾಧ್ಯಕ್ಷರ ಮಾತನ್ನು ಕಾಂಗ್ರೆಸ್ ಸದಸ್ಯರು ಒಪ್ಪದೆ ತಮ್ಮ ಧರಣಿ ಮುಂದುವರಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಹಕ್ಕುಗಳನ್ನು ಹರಣ ಮಾಡುತ್ತಿದ್ದಿರಾ, ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಶಾಸಕ ಸಂಗಮೇಶ್ ಅವರ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಮತ್ತೆ ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯರ ಘೋಷಣೆ ಮಧ್ಯೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಏನು ಮಾತನಾಡಿದರೆಂಬುದೇ ಗೊತ್ತಾಗಲಿಲ್ಲ.
ಕಾಂಗ್ರೆಸ್ ಸದಸ್ಯರ ಘೋಷಣೆಗಳಿಂದಾಗಿ ಚರ್ಚೆಗೆ ಅಡ್ಡಿಯಾಗುವುದನ್ಮು ಗಮನಿಸಿದ ಸ್ಪೀಕರ್, ಸದನವನ್ನು ಮಧ್ಯಾಹ್ನ 3.30 ಕ್ಕೆ ಮುಂದೂಡಿದರು.