ಬೆಂಗಳೂರು : ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯಸಿಂಗ್ ಬಂಧನದ ವಿಷಯ ಪ್ರಸ್ತಾಪಿಸಲು ಅವಕಾಶ ಕೊಡುವಂತೆ ಒತ್ತಾಯಿಸಿ, ಸದನದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯ ಶಾಸಕರು, ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಪಕ್ಷದವರ ನಡುವೆ ಪರಸ್ಪರ ವಾಗ್ವಾದ ಉಂಟಾಯಿತು.
ಸದನದಲ್ಲಿ ಕಾಂಗ್ರೆಸ್ ಸದಸ್ಯರ ಗದ್ದಲ ಲಿಖಿತವಾಗಿ ಯಾವುದೇ ನೋಟಿಸ್ ಕೊಡದೆ ಚರ್ಚೆಗೆ ಅವಕಾಶ ಇಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳುತ್ತಿದ್ದಂತೆ ಅವರ ಪೀಠದ ಮುಂದೆ ಕಾಂಗ್ರೆಸ್ ಶಾಸಕರು ಧರಣಿ ಆರಂಭಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಎಚ್.ಕೆ. ಪಾಟೀಲ್ ''ಕರ್ನಾಟಕದಲ್ಲಿ ಹೊರಗಿನಿಂದ ಬಂದವರಿಗೆ ಕಾನೂನು ಅನ್ವಯವಿಲ್ಲವೆಂದರೆ ಹೇಗೆ?. ದಿಗ್ವಿಜಯ್ ಸಿಂಗ್ ಕೇಂದ್ರ ಸಚಿವರಾಗಿದ್ದವರು'' ಎಂದು ಹೇಳುತ್ತಿದ್ದಂತೆ ಸಚಿವರಾದ ಕೆ.ಎಸ್. ಈಶ್ವರಪ್ಪ , ಮಾಧುಸ್ವಾಮಿ, ಜಗದೀಶ್ ಶೆಟ್ಟರ್ ಮಧ್ಯ ಪ್ರವೇಶಿಸಿ ''ನೀವು ಏನು ಹೇಳಲು ಹೊರಟ್ಟಿದ್ದೀರಿ..?'' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ''ನೀವು ಚರ್ಚೆಗೆ ನೋಟಿಸ್ ಕೊಟ್ಟಿಲ್ಲ. ಹಾಗಾಗಿ ಚರ್ಚೆಗೆ ಅವಕಾಶವಿಲ್ಲ'' ಎಂದು ಹೇಳಿ, ಬಜೆಟ್ ಮೇಲಿನ ಚರ್ಚೆ ಆರಂಭಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಆಹ್ವಾನ ನೀಡಿದರು.
ಆಗ ಸಿದ್ದರಾಮಯ್ಯ ಅವರು ಮಾತನಾಡಿ ''ಈ ಮನೆಯ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕೇಳಿದರೆ ಸರ್ಕಾರದಿಂದ, ಡಿಜಿಪಿ ಅವರಿಂದ ಆದೇಶ ಬಂದಿದೆ. ಮಧ್ಯಪ್ರದೇಶದಿಂದ ಬಂದಿರುವ ಶಾಸಕರ ಭೇಟಿಗೆ ಯಾರನ್ನು ಬಿಡುವುದಿಲ್ಲ ಎಂದು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಡಿಜಿಪಿ ಅವರಿಂದ ಆದೇಶ ಬಂದಿದೆ ಎನ್ನುತ್ತಾರೆ. ನಮ್ಮ ಶಾಸಕರಾದ ಡಿ.ಕೆ. ಶಿವಕುಮಾರ್, ಡಾ.ರಂಗನಾಥ್, ರಿಜ್ವಾನ್ ಅರ್ಷದ್ ಮತ್ತಿತರರನ್ನು ವಶಕ್ಕೆ ಪಡೆದಿದ್ದಾರೆ'' ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಗದೀಶ್ ಶೆಟ್ಟರ್ ''ನೋಟಿಸ್ ಇಲ್ಲದೆ ಪ್ರಸ್ತಾಪ ಮಾಡಲು ಹೊರಟಿದ್ದೀರಿ, ನಿಯಮಾವಳಿಗಳಿಲ್ಲವೆ? ಸದನ ನಡೆಯುವುದು ಬೇಕಿಲ್ಲವೆ'' ಎಂದು ಪ್ರಶ್ನಿಸಿದರು. ಅಷ್ಟರಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು.
ಇದರ ನಡುವೆಯೇ ಮುಖ್ಯಮಂತ್ರಿ ಮತ್ತು ಸಚಿವರ ಮುಂದಿಡುವ ಕಾಗದ ಪತ್ರಗಳನ್ನು ಸಭೆಯ ಮಂದೆ ಮಂಡಿಸಿ, ವರದಿ ಒಪ್ಪಿಸಲಾಯಿತು. ಆನಂತರ ವಿಧೇಯಕವೊಂದನ್ನು ಕೂಡಾ ಮಂಡಿಸಲಾಯಿತು. ಈ ಹಂತದಲ್ಲಿ ಮಾತನಾಡಿದ ಸಭಾಧ್ಯಕ್ಷರು ''ನೀವು ಪ್ರಸ್ತಾಪಿಸಬೇಕಾದ ವಿಷಯದ ಬಗ್ಗೆ ನೋಟಿಸ್ ಈಗ ಕೊಟ್ಟಿದ್ದೀರಿ. ಏನಾಗಿದೆ ಎಂಬ ಮಾಹಿತಿ ತರಿಸಿಕೊಳ್ಳಲಾಗುವುದು. ವಿರೋಧ ಪಕ್ಷದ ನಾಯಕರು ಬಜೆಟ್ ಮೇಲಿನ ಚರ್ಚೆ ಮಾಡಲಿ. ಧರಣಿ ಕೈಬಿಡಿ'' ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಆದರೂ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕೈಬಿಡದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಕೆಲಕಾಲ ಮುಂದೂಡಿದರು.