ಬೆಂಗಳೂರು:ರಾಜ್ಯ ಬಿಜೆಪಿ ಸರ್ಕಾರ ಪ್ರತಿ ನಿತ್ಯ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರವನ್ನು ದಾಖಲೆ ಮಟ್ಟದಲ್ಲಿ ಮಾಡಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ. ದಿನನಿತ್ಯವೂ ಪ್ರತಿ ಇಲಾಖೆಯ ಭ್ರಷ್ಟಾಚಾರದ ಕರ್ಮಕಾಂಡ ಬಹಿರಂಗವಾಗುತ್ತಿದೆ. ಮುಖ್ಯಮಂತ್ರಿಗಳು ಯಾವುದೇ ತನಿಖೆಗೆ ಮುಂದಾಗದೇ ಮೌನಕ್ಕೆ ಶರಣಾಗಿದ್ದರೆ ಎಂದು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ರೇಸ್ ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿತು.
ಪ್ರತಿ ಇಲಾಖೆಯಿಂದಲೂ ಮುಖ್ಯಮಂತ್ರಿ ವಾಮಮಾರ್ಗದಿಂದ ಹಣ ಪಡೆಯುತ್ತಿದ್ದಾರೆ ಎಂಬುದನ್ನು ರಾಜ್ಯದ ಜನತೆ ಮುಂದೆ ಬಹಿರಂಗ ಪಡಿಸಬೇಕು. ಬಿಜೆಪಿಯ ಭ್ರಷ್ಟಾಚಾರವನ್ನು ಮರೆಮಾಚಲು ಕಾಶ್ಮೀರ್ ಫೈಲ್ಸ್ ಎಂಬ ಚಲನ ಚಿತ್ರವನ್ನು ವೀಕ್ಷಿಸುವ ಮೂಲಕ, ರಾಜ್ಯದ ಜನತೆಯ ಸಂಕಷ್ಟವನ್ನು ಅರಿಯದ ನಿರ್ಲಕ್ಷ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಕಾರ್ಯಕರ್ತರು ದೂರಿದರು. ಆರೋಗ್ಯ ಇಲಾಖೆಯಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿದೆ. ಸಾರಿಗೆ ಇಲಾಖೆ ಇದ್ದೂ ಸತ್ತಂತೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಕಂದಾಯ ಇಲಾಖೆಯಲ್ಲಿ ನಿತ್ಯವೂ ವಸೂಲಿ ನಡೆಯುತ್ತಿದೆ. ಹೀಗೆ ಪ್ರತಿ ಇಲಾಖೆಯಲ್ಲೂ ಸಹ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಬಿಜೆಪಿ ಸರ್ಕಾರ ಲಂಚ ಪಡೆಯುವ ಸರ್ಕಾರ ಎಂಬುದು ಈಗ ಜನತೆಗೆ ತಿಳಿಯುತ್ತಿದೆ. ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸದೆ ಧಾರ್ಮಿಕ ಹಾಗೂ ಭಾವನಾತ್ಮಕ ವಿಷಯಗಳನ್ನು ಕೆದಕಿ ಕೋಮುವಾದವನ್ನು ಸೃಷ್ಟಿಸುವುದೇ ಬಿಜೆಪಿ ಸರ್ಕಾರದ ಒಂದಂಶದ ಕಾರ್ಯಕ್ರಮವಾಗಿದೆ ಎಂದು ಕಿಡಿಕಾರಿದರು.