ಬೆಂಗಳೂರು:ಮಹಾನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸರ್ಕಾರವನ್ನು ಆಗ್ರಹಿಸಿ ಅ.21ರಂದು ಬೆಂಗಳೂರಿನ ಶಾಸಕರು, ಮಾಜಿ ಮಹಾಪೌರರು ಹಾಗೂ ಪಾಲಿಕೆ ಸದಸ್ಯರು ಸಿಎಂ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸಿಎಂ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ: ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅ.21ರಂದು ಬೆಳಗ್ಗೆ 11 ಗಂಟೆಗೆ ಆನಂದರಾವ್ ವೃತ್ತದಿಂದ ಮುಖ್ಯಮಂತ್ರಿಗಳ ಮನೆವರೆಗೂ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಮನವಿ ಮಾಡಲಿದ್ದೇವೆ. ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ಹೈಕೋರ್ಟ್ ಕೂಡ ಕಳೆದ ಒಂದೂವರೆ ವರ್ಷಗಳಿಂದ ರಸ್ತೆಗುಂಡಿಗಳ ವಿಚಾರವಾಗಿ ಚಾಟಿ ಬೀಸುತ್ತಲೇ ಇದೆ. ಆಯುಕ್ತರು, ಮುಖ್ಯ ಇಂಜಿನಿಯರ್‌ಗಳನ್ನು ಕರೆಸಿ ರಸ್ತೆ ಗುಂಡಿ ಮುಚ್ಚಿಸದಿದ್ದರೆ ಜೈಲಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ನಿರ್ದೇಶನ ನೀಡಿದ ನಂತರವೂ ಬೆಂಗಳೂರಿನಲ್ಲಿ ರಸ್ತೆಗುಂಡಿ ಕಡಿಮೆಯಾಗಿಲ್ಲ ಎಂದು ಹೇಳಿದರು.
2008ರಿಂದ 2013ರವರೆಗೂ ಬಿಜೆಪಿ ಸರ್ಕಾರ ಅಧಿಕಾರ ಮಾಡಿ ನಂತರ ನಮ್ಮ ಸರ್ಕಾರ ಬಂದ ನಂತರವೂ ಎಲ್ಲ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿತ್ತು. ನಾವು ಬಂದ ನಂತರ ರಸ್ತೆಗಳ ಡಾಂಬರೀಕರಣ ಮಾಡಲಾಯಿತು. ಬಿಜೆಪಿ ಸರ್ಕಾರ ಎಂದಿಗೂ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಿಲ್ಲ. ಅವರು ಕೇವಲ ಶಾಸಕರುಗಳಿಗೆ ಅನುದಾನ ನೀಡುವುದರ ಬಗ್ಗೆ ಗಮನಹರಿಸುತ್ತಾರೆ. ಆಗ ಪ್ರಮುಖ ರಸ್ತೆಗಳು ತಬ್ಬಲಿಯಾಗುತ್ತವೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಸ್ಥಿತಿ ಹದಗೆಡುತ್ತದೆ. ಈ ಸರ್ಕಾರ ಪ್ರಮುಖ ರಸ್ತೆಗಳ ನಿರ್ವಹಣೆಗೆ ಇಟ್ಟಿದ್ದ 400 ಕೋಟಿ ರೂ. ಅನುದಾನವನ್ನು ಹಿಂಪಡೆದಿದ್ದರು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ : ಈಗಲೂ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 198 ವಾರ್ಡ್ ಗಳಿಗೆ 2020-21ರಲ್ಲಿ ಸರ್ಕಾರದಿಂದ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ನಂತರ 2021-22ರಲ್ಲೂ ಬಿಡಿಗಾಸು ಅನುದಾನ ನೀಡಲಿಲ್ಲ. 2022-23ಕ್ಕೆ ಬಜೆಟ್ ನಲ್ಲಿ ಹೊಸ ವಾರ್ಡ್ ಗೆ 6 ಕೋಟಿ, ಹಳೇ ವಾರ್ಡ್ ಗಳಿಗೆ 4 ಕೋಟಿ ರೂ. ಘೋಷಿಸಿದ್ದಾರೆ. ಈ ಅನುದಾನ ಕನ್ನಡಿಯೊಳಗಿನ ಗಂಟಿನಂತೆ ಕೇವಲ ಕಾಗದ ಮೇಲೆ ಅನುದಾನ ಇದೆಯೇ ಹೊರತು ಈ ಅನುದಾನ ಬಿಡುಗಡೆ ಆಗಿಲ್ಲ.
ಇಂಜಿನಿಯರ್ ಗಳಿಗೆ ಟೆಂಡರ್ ಕರೆಯಲು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಕಳೆದ ವರ್ಷ ವಾರ್ಡ್ ಗೆ 60 ಲಕ್ಷ ಅನುದಾನ ನೀಡಿದ್ದರು. ಈ ಅನುದಾನ ಕೇವಲ ಚರಂಡಿ ಸ್ವಚ್ಛ ಹಾಗೂ ಟ್ರ್ಯಾಕ್ಟರ್ ನಿರ್ವಹಣೆಗೆ 20 ಲಕ್ಷ, ರಸ್ತೆ ಗುಂಡಿ ಮುಚ್ಚಲು 20 ಲಕ್ಷ ಹಾಗೂ ಕೊಳವೆ ಬಾವಿ ನಿರ್ವಹಣೆಗೆ 20 ಲಕ್ಷ ನೀಡಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಕಳೆದ ಮೂರು ವರ್ಷಗಳಿಂದ ಪಾಲಿಕೆ ಕೇವಲ 40 ಕೋಟಿ ಬಿಡುಗಡೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ವಾರ್ಡ್ ಗಳಿಗೆ ಪಾಲಿಕೆಯಿಂದ ನಯಾ ಪೈಸೆ ಹಣ ಸಿಕ್ಕಿಲ್ಲ. ಬೆಂಗಳೂರು ಅಭಿವೃದ್ಧಿ ಇಲಾಖೆ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದು, ಇವರ ಬೆಂಬಲಕ್ಕೆ 7 ಸಚಿವರು ಇದ್ದಾರೆ. ಸಿಎಂ ಸೇರಿದರೆ ಬೆಂಗಳೂರಿಗೆ ಅಷ್ಟ ದಿಕ್ಪಾಲಕರಂತೆ 8 ಜನ ಸರ್ಕಾರದಲ್ಲಿ ಇದ್ದಾರೆ. ಇನ್ನು ಬಿಡಿಎ ಮುಖ್ಯಸ್ಥರೂ, ಮುಖ್ಯ ಸಚೇತಕರು ಬೆಂಗಳೂರಿನ ಶಾಸಕರೇ ಆಗಿದ್ದಾರೆ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ಲಕ್ಷಗಟ್ಟಲೆ ಗುಂಡಿ ಬಿದ್ದಿವೆ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಮಳೆ ಬಿದ್ದು, ರಸ್ತೆ ಗುಂಡಿ ಬೀಳುತ್ತಿದ್ದವು. ತಕ್ಷಣ ಅವುಗಳನ್ನು ಮುಚ್ಚುವ ಕೆಲಸ ಆಗುತ್ತಿತ್ತು. ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಸದನದಲ್ಲಿ ವಿವರಿಸಿದ್ದೇನೆ ಎಂದು ಹೇಳಿದರು.
ಶಾಸಕರ ಅನುದಾನದಲ್ಲಿ ಭೇದಬಾವ ಸರಿಯಲ್ಲ: ಕೇವಲ 15 ಬಿಜೆಪಿ ಶಾಸಕರ ಕ್ಷೇತ್ರ ಅಭಿವೃದ್ಧಿ ಆದರೆ ಬೆಂಗಳೂರಿನ ಅಭಿವೃದ್ಧಿಯೇ? ಎಲ್ಲ 28 ಕ್ಷೇತ್ರ ಅಭಿವೃದ್ಧಿ ಆದರೆ ಮಾತ್ರ ಬೆಂಗಳೂರು ಅಭಿವೃದ್ಧಿ ಆಗುತ್ತದೆ. ಕೇವಲ ಬಿಜೆಪಿ ಶಾಸಕರಿಗೆ ಅನುದಾನ ನೀಡಿದರೆ, ಉಳಿದವರಿಗೆ ಅನುದಾನ ನೀಡದಿದ್ದರೆ, ಎಲ್ಲ ಕಡೆ ರಸ್ತೆ ಗುಂಡಿ ಬೀಳುತ್ತದೆ. ಹೀಗಾಗಿ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡಬೇಡಿ. ಆಡಳಿತ ಪಕ್ಷದಲ್ಲಿರುವ ಕಾರಣ ಸ್ವಲ್ಪ ಹೆಚ್ಚಾಗಿ ತೆಗೆದುಕೊಳ್ಳಲಿ. ಕಾಂಗ್ರೆಸ್ ನ 12 ಶಾಸಕರುಗಳಿಗೆ 1938 ಕೋಟಿ ನೀಡಿದರೆ, ಜೆಡಿಎಸ್ ಶಾಸಕರಿಗೆ 162 ಕೋಟಿ, ಬಿಜೆಪಿ 15 ಶಾಸಕರಿಗೆ 8774 ಕೋಟಿ ರೂ. ನೀಡಿದ್ದಾರೆ. ಆ ಮೂಲಕ ನಮಗಿಂತಲೂ ನಾಲ್ಕೂವರೆ ಕೋಟಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಅಪಖ್ಯಾತಿ : ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ ತರುತ್ತಿದ್ದಾರೆ. ಮೊನ್ನೆ ರಸ್ತೆಗುಂಡಿಗೆ ಮಹಿಳೆ ಬಲಿಯಾಗಿದ್ದು, ಈವರೆಗೂ ಒಟ್ಟು 16 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ಪತ್ರಿಕೆಗಳಲ್ಲಿ ರಸ್ತೆ ಗುಂಡಿ ವಿಚಾರವಾಗಿ ವರದಿಗಳು ಬರುತ್ತಲೇ ಇವೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ 11,900 ಕಿ,ಮೀ ರಸ್ತೆಗಳಿದ್ದು, 5 ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ ಕಳೆದ 5 ವರ್ಷಗಳಲ್ಲಿ 20,060 ಕೋಟಿ ನೀಡಲಾಗಿದೆ ಎಂದು ಹೇಳಿದ್ದಾರೆ. ನಮ್ಮ ಕಾಲದಲ್ಲಿ ಮಾಡಲಾಗಿರುವ 120 ಕಿ.ಮೀ ಕಾಂಕ್ರೀಟ್ ರಸ್ತೆಗಳಲ್ಲಿ ಯಾವುದೇ ಗುಂಡಿ ಬಿದ್ದಿಲ್ಲ. ಈ ರಸ್ತೆ ಮಾಡುವಾಗ ಭ್ರಷ್ಟಾಚಾರದ ಆರೋಪ ಮಾಡಿದ್ದರು. ನಂತರ ಅವರೇ ತನಿಖೆ ಮಾಡಿದಾಗ ಯಾವುದೇ ಲೋಪಗಳು ಇರಲಿಲ್ಲ.ಬಿಜೆಪಿ ಸರ್ಕಾರ ಇನ್ನಾದರೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಇವರ ತಾರತಮ್ಯದಿಂದ ರಸ್ತೆಗಳು ಹಾಳಾಗಿದ್ದು, ಇವರಿಗೆ ಜನ ಛೀಮಾರಿ ಹಾಕುತ್ತಿದ್ದಾರೆ. ನಿಮಗೆ ಅಧಿಕಾರ ನಡೆಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ. ನಮ್ಮ ಕಾಲದಲ್ಲಿ ಹೈಕೋರ್ಟ್ ನಿಂದ ಈ ರೀತಿ ಛೀಮಾರಿ ಹಾಕಿಸಿಕೊಂಡಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ :ಕಾಂಗ್ರೆಸ್ನವರಿಗೆ ಕಾಮಾಲೆ ಕಣ್ಣು, ಆ ಪಕ್ಷಕ್ಕೆ ಡೈವೋರ್ಸ್ ಕೊಟ್ಟು ಬಂದೆ: ಬಿ ಸಿ ಪಾಟೀಲ್