ಬೆಂಗಳೂರು:ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಕನಕಪುರ ರಸ್ತೆಯ ಕೆಎಸ್ಐಟಿ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.
ಅನರ್ಹ ಶಾಸಕ ಸೋಮಶೇಖರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ - ಹೆಚ್.ಎಂ. ರೇವಣ್ಣ
ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಸೋಮಶೇಖರ್ ಅವರೇ ನೀವು ಕಾಂಗ್ರೆಸ್ ಬಿಟ್ಟು ಅನೈತಿಕವಾಗಿ ಬಿಜೆಪಿ ಜೊತೆಗೆ ಹೋಗಿದ್ದೀರಿ. ಅತೃಪ್ತರಾಗುವಂತಾದ್ದು ಏನಾಗಿತ್ತು ನಿಮಗೆ. ಕೆಪಿಸಿಸಿಯಿಂದ ನಿಮ್ಮನ್ನು ಬೆಂಗಳೂರು ನಗರ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಳಿಕ ನಿಮ್ಮನ್ನು ಶಾಸಕರನ್ನಾಗಿ ಮಾಡಲಾಗಿತ್ತು. ಇಷ್ಟೆಲ್ಲಾ ಆದರೂ ಕೂಡ ಪಕ್ಷ ಬಿಟ್ಟು ಹೋಗಿರುವುದು ಅಪರಾಧ. ಇವತ್ತು ನೀವು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಏಕವಚನದಲ್ಲಿ ಟೀಕಿಸುವುದು ಸರಿಯೇ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಬಸ್ ಏಜೆಂಟ್ ಆಗಿದ್ದ ಸೋಮಶೇಖರ್ ಅವರನ್ನು ಕರೆತಂದು ಕಾಂಗ್ರೆಸ್ ಪಕ್ಷ ಶಾಸಕರಾಗಿ ಮಾಡಿ, ಬಿಡಿಎ ಅಧ್ಯಕ್ಷರಾಗಿ ಮಾಡಲಾಯಿತು. ಸೋಮಶೇಖರ್ ಕಾಂಗ್ರೆಸ್ನಿಂದ ಎಲ್ಲವನ್ನು ಪಡೆದಿದ್ದಾರೆ. ಅದರೆ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಏನು ಉಪಯೋಗವಾಗಿಲ್ಲ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲಿ ಮಾತನಾಡಿ ನಿಂದಿಸಿದ್ದಾರೆ. ಸೋಮಶೇಖರ್ಗೆ ತಾಕತ್ತಿದ್ದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ವಿರುದ್ಧ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದರು. ತಲಘಟ್ಟಪುರ ಜನತೆ ಮುಂದಿನ ಉಪ ಚುನಾವಣೆಯಲ್ಲಿ ಖಂಡಿತ ಸೋಮಶೇಖರ್ಗೆ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.