ಬೆಂಗಳೂರು:ಶಕ್ತಿಗಣಪತಿನಗರ ವಾರ್ಡ್-74ರ 4ನೇ ಮುಖ್ಯರಸ್ತೆಯಲ್ಲಿ ಸೇತುವೆ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಸೂಕ್ತ ತನಿಖೆ ಕೈಗೊಳ್ಳಬೇಕು ಹಾಗೂ ತುರ್ತಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಕಮಲಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರತಿಭಟನೆ ನಡೆಸಿದೆ.
ಕಮಲಾನಗರ ಮಾರ್ಕೆಟ್ ವೖತ್ತದಿಂದ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳದವರೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮೂಲಕ ಸಾಗಿ ಬಂದು ಘೋಷಣೆಗಳನ್ನು ಕೂಗಿದರು.
ಮಾಜಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಕಮಲಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎನ್.ಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ನರಸಿಂಹಮೂರ್ತಿ, ಮಹಿಳಾ ಕಾಂಗ್ರೆಸ್,ಯುವ ಕಾಂಗ್ರೆಸ್ ವಿವಿಧ ಘಟಕಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಎಂ.ಶಿವರಾಜು ಮಾತನಾಡಿ, ಯಾವುದೇ ಆನುಮೋದನೆ ಇಲ್ಲದೇ ಸೇತುವೆ ಕಾಮಗಾರಿ ಆರಂಭಿಸಿರುವುದು ನೋಡಿದರೆ ಅಧಿಕಾರಿಗಳ ಭ್ರಷ್ಟಾಚಾರ ಎಸಗಿರುವುದು ಕಂಡು ಬರುತ್ತದೆ. ಈ ಭಾಗದಲ್ಲಿ ಕಳೆದ ಬಾರಿ ಮಳೆಯಿಂದ ಭಾರಿ ನಷ್ಟಗಳು ಸಂಭವಿಸಿದೆ. ಸೇತುವೆ ಕಾಮಗಾರಿಗಳಲ್ಲಿ ಅವ್ಯವಹಾರ ಮಾಡಿರುವ ಇಂಜನಿಯರ್‌ಗಳು, ಅಧಿಕಾರಿಗಳನ್ನು ಕೊಡಲೇ ಅಮಾನತು ಮಾಡಿ, ಸೂಕ್ತ ತನಿಖೆ ಮಾಡಬೇಕು ಮತ್ತು ತುರ್ತಾಗಿ ಸೇತುವೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಕಾರ್ಯಪಾಲಕ ಅಭಿಯಂತರಾದ ತಿಮ್ಮರಸು ಮತ್ತು ಅಧಿಕಾರಿಗಳ ತಂಡ ಆಗಮಿಸಿ, ಮುಂದಿನ 15 ದಿನಗಳ ಒಳಗಾಗಿ ಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.