ಬೆಂಗಳೂರು :ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆಯಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಆಡಳಿತ ಪಕ್ಷ ಬಿಜೆಪಿ ಮೂರನ್ನೂ ತನ್ನ ತೆಕ್ಕೆಗೆ ಎಳೆದುಕೊಳ್ಳಲು ಪ್ರಯತ್ನ ನಡೆಸಿದ್ದರೆ, ಇತ್ತ ಎಲ್ಲೆಡೆ ತನ್ನ ಪ್ರಾಬಲ್ಯ ಮೆರೆಯಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.
ವಿವಿಧ ವಿಚಾರಗಳನ್ನು ಮುಂದಿಟ್ಟು ಕಾರ್ಯತಂತ್ರ ಹೆಣೆಯುತ್ತಿರುವ ಕಾಂಗ್ರೆಸ್ ನಾಯಕರು, ಜನರ ಬೆಂಬಲ ಪಡೆದು ಗೆಲ್ಲುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಬದಲಿಸಲು ಯತ್ನಿಸುತ್ತಿದ್ದಾರೆ.
ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆ, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ, ಎರಡು ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ಸಾಲು ಸಾಲಾಗಿ ಬರಲಿವೆ. ಎಲ್ಲಾ ಕಡೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ 2023ರ ವಿಧಾನಸಭೆ ಚುನಾವಣೆ ವೇಳೆಗೆ ರಾಜ್ಯದ ಮೇಲೆ ತನ್ನ ಹಿಡಿತ ಸಾಧಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಮೂರು ಮಹಾನಗರ ಪಾಲಿಕೆ ಚುನಾವಣೆಗೆ ಕೈ ನಾಯಕರ ಸಿದ್ಧತೆ ಈ ಕಾರ್ಯಕ್ಕೆ ಪೂರಕವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಎಲ್ಲೆಡೆ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಖುದ್ದು ಕಾಳಜಿ ವಹಿಸಿಕೊಂಡು ಕಲಬುರಗಿ ವಿಭಾಗ ಮತ್ತು ಬೆಳಗಾವಿ ವಿಭಾಗದ ಮುಖಂಡರ ಸಭೆಯನ್ನ ಹುಬ್ಬಳ್ಳಿಯಲ್ಲಿ ನಡೆಸಿದ್ದಾರೆ.
ಕಾಂಗ್ರೆಸ್ ತಂತ್ರಗಾರಿಕೆ :ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ನಿನ್ನೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಎಂಇಎಸ್ ಜೊತೆ ಕೈ ಜೋಡಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿಯೂ ಮರಾಠಿಗರಿಗೆ ಮಣೆ ಹಾಕಬಹುದು ಎಂದು ಊಹಿಸಲಾಗಿತ್ತು.
ಆದರೆ, ಇಲ್ಲಿನ ಪರಿಸ್ಥಿತಿ ಬೇರೆಯೇ ಎಂದು ಅರಿತಿರುವ ರಾಜ್ಯ ಕಾಂಗ್ರೆಸ್ ನಾಯಕರು, ಪಕ್ಷದ ವರಿಷ್ಠರನ್ನು ಮನವೊಲಿಸುವಲ್ಲಿ ಸಫಲವಾಗಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಉದ್ದೇಶಪೂರ್ವಕವಾಗಿ ಗಡಿ ವಿವಾದ, ಮಹದಾಯಿ ಯೋಜನೆ, ಜಾತಿ ಜನಗಣತಿ ವರದಿ ಜಾರಿಗೆ ಒತ್ತಾಯ ಸೇರಿ ಹಲವು ತಂತ್ರಗಾರಿಕೆ ಶುರು ಮಾಡಿಕೊಂಡಿದೆ. ಇದು ಆಡಳಿತ ಪಕ್ಷದ ಅಲೆಯನ್ನು ಮೀರಿ ತಮ್ಮ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಇದು ಸುಲಭ ಅಲ್ಲದಿದ್ರೂ ಪ್ರಯತ್ನವನ್ನಂತೂ ಸಕಾಲದಲ್ಲಿ ಆರಂಭಿಸಿದೆ.
ಪಾಲಿಕೆ ಹಿಡಿತ :ಒಂದೆಡೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದರೂ ಮೇಯರ್ ಪಟ್ಟವನ್ನು ಜೆಡಿಎಸ್ಗೆ ಬಿಟ್ಟುಕೊಡಲೇಬೇಕಿದೆ. ಇನ್ನೊಂದೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇನ್ನೂ ಚುನಾವಣೆ ಘೋಷಣೆ ಆಗುತ್ತಿಲ್ಲ. ಆರಂಭದ ನಾಲ್ಕು ವರ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್ಗೆ ಕೊನೆಯ ವರ್ಷ ಜೆಡಿಎಸ್ ಕೈಕೊಟ್ಟಿದ್ದು, ಕೊಂಚ ಬೇಸರ ತರಿಸಿದೆ.
ಸದ್ಯ ಪಾಲಿಕೆ ಮೇಲಿದ್ದ ಹಿಡಿತವೂ ಕಡಿಮೆಯಾಗಿದೆ. ಇದರಿಂದ ಈಗ ನಡೆಯುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಮೇಲೆ ಹಿಡಿತವನ್ನು ತಮ್ಮ ಕೈವಶ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.
ಈಗಾಗಲೇ ಕಾಂಗ್ರೆಸ್ ನಾಯಕರು ಆ ಭಾಗದ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಶತಾಯಗತಾಯ ಪಾಲಿಕೆಗಳನ್ನು ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಮೂರು ಮಹಾನಗರ ಪಾಲಿಕೆಗಳಿಗೆ ಸೆ.3ರಂದು ಚುನಾವಣೆ ನಡೆಯಲಿದೆ. ಸೆ.6ಕ್ಕೆ ಮತ ಎಣಿಕೆ ನಡೆಯಲಿದೆ.
ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ. ಇಂದು ಸಂಜೆಯವರೆಗೂ ಕಾಂಗ್ರೆಸ್ ನಾಯಕರು ಕಣಕ್ಕಿಳಿಯುವ ಅಭ್ಯರ್ಥಿಗಳ ವಿಚಾರವಾಗಿ ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ (58 ವಾರ್ಡ್), ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (82 ವಾರ್ಡ್) ಮತ್ತು ಕಲಬುರಗಿ ಮಹಾನಗರ ಪಾಲಿಕೆಯ (55 ವಾರ್ಡ್)ಗಳಿಗೆ ಚುನಾವಣೆ ನಡೆಯುತ್ತಿದೆ. ನಾಳೆ ಸಂಜೆಯ ಹೊತ್ತಿಗೆ ಕಾಂಗ್ರೆಸ್ ಹೋರಾಟದ ಅಖಾಡ ಅಂತಿಮ ರೂಪ ಪಡೆಯಲಿದೆ. ರಾಜ್ಯ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳಲಿದ್ದಾರೆ.
ಓದಿ: ಮಹಿಳೆಯರ ಘನತೆ ಎತ್ತಿ ಹಿಡಿದು ಸುರಕ್ಷಿತ ವಾತಾವರಣ ಖಾತ್ರಿಪಡಿಸಿ : ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು