ಕರ್ನಾಟಕ

karnataka

ETV Bharat / state

ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ನಿಲುವು-ನಿರ್ಧಾರವೇನು ಗೊತ್ತಾ? - ಮಳೆಗಾಲದ ಜಂಟಿ ಅಧಿವೇಶನ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿತ್ಯ ವರದಿಯಾಗುತ್ತಿದೆ. ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

vidhana soudha
ವಿಧಾನ ಸೌಧ

By

Published : Sep 12, 2021, 10:54 PM IST

ಬೆಂಗಳೂರು: ನಾಳೆಯಿಂದ 10 ದಿನಗಳ ಕಾಲ ವಿಧಾನಮಂಡಲ ಮಳೆಗಾಲದ ಜಂಟಿ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸರ್ಕಾರದ ವಿರುದ್ಧ ಹೋರಾಟದ ಅಸ್ತ್ರ ಪ್ರಯೋಗಿಸಲು ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿದೆ.

ಜನಸಾಮಾನ್ಯರನ್ನು ತತ್ತರಗೊಳಿಸಿರುವ ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ಅಧೋಗತಿಗೆ ಇಳಿದಿರುವ ರಾಜ್ಯದ ಹಣಕಾಸು ಪರಿಸ್ಥಿತಿ ಚರ್ಚಾ ವಿಷಯಗಳಾಗಿವೆ. ಈ ವಿಷಯಗಳನ್ನು ಕಾಂಗ್ರೆಸ್​ ಅಸ್ತ್ರವಾಗಿ ಬಳಸಿಕೊಳ್ಳಲಿದೆ. ಆ ಮೂಲಕ ಜನರ ದೃಷ್ಟಿಯಲ್ಲಿ ತಮ್ಮ ವರ್ಚಸ್ಸು ಕಡಿಮೆ ಆಗದಂತೆ ನೋಡಿಕೊಳ್ಳಲು ಸಹ ನಿರ್ಧರಿಸಿದೆ.

ಈ ಹಿನ್ನೆಲೆ ಅಧಿವೇಶನದಲ್ಲಿ ಹೆಚ್ಚಾಗಿ ಪ್ರತಿಪಕ್ಷಗಳ ಪ್ರತಿಭಟನೆ, ಬಾವಿಗಿಳಿಯುವುದು, ಕಲಾಪ ಬಹಿಷ್ಕಾರದಂತಹ ನಿರ್ಧಾರಗಳು ಕಡಿಮೆ ಇರಲಿದೆ ಎನ್ನಲಾಗುತ್ತಿದೆ. ಅದರ ಬದಲು ಬೆಲೆ ಏರಿಕೆ, ಜನಸಾಮಾನ್ಯರ ಮೇಲೆ ಹೊರೆಯಾಗುವ ಸರ್ಕಾರದ ನಿರ್ಧಾರಗಳ ವಿರುದ್ಧ ವಿನೂತನವಾಗಿ ಪ್ರತಿಭಟಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಸರ್ಕಾರಕ್ಕೆ ಮುಜುಗರ ಆಗುವ ರೀತಿ ಲೇವಡಿ ಮಾಡಲು ಯೋಚಿಸಿರುವ ಕಾಂಗ್ರೆಸ್ ನಾಯಕರು, ಮೊದಲ ದಿನವೇ ಅಧಿವೇಶನಕ್ಕೆ ಎತ್ತಿನ ಗಾಡಿ ಮೇಲೆ ಬರಲು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿತ್ಯ ವರದಿಯಾಗುತ್ತಿದೆ. ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಇಲ್ಲ. ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವೇ ಇದಕ್ಕೆ ಸಾಕ್ಷಿ. ಭ್ರಷ್ಟಾಚಾರವಂತೂ ಮಿತಿ ಮೀರಿದ್ದು, ಈ ಸರ್ಕಾರ 20 ಪರ್ಸೆಂಟ್ ಸರ್ಕಾರ ಎಂಬುದು ಈಗಾಗಲೇ ಜಗಜ್ಜಾಹೀರು ಆಗಿದೆ. ಹಣಕಾಸು ಪರಿಸ್ಥಿತಿ ಅಧೋಗತಿಗೆ ಇಳಿದಿದೆ ಎಂದು ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಂಡ ಬಳಿಕ ಘೋಷಿಸಿದ ಕಾರ್ಯಕ್ರಮಗಳಿಗೆ ಹಣ ಇಲ್ಲದಂತೆ ಆಗಿದೆ. ರಾಜ್ಯದಲ್ಲಿಯೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಈ ನೀತಿ ಕುರಿತು ಸಂಸತ್ತಿನಲ್ಲಿ ಚರ್ಚೆ ಆಗಿಲ್ಲ. ರಾಜ್ಯದಲ್ಲಿಯೂ ಸಮಾಲೋಚನೆ ನಡೆದಿಲ್ಲ ಎಂಬ ವಿಚಾರದತ್ತ ಹೆಚ್ಚಿನ ಗಮನ ಹರಿಸಲಾಗುವುದು ಎಂದಿದ್ದಾರೆ.

ಎಲ್ಲ ರಾಜ್ಯಗಳ ಮೇಲೆ ಕೇಂದ್ರ ಸವಾರಿ ಮಾಡುತ್ತಿದೆ. ದೇಶದಲ್ಲಿ ಏಕ ಚಕ್ರಾಧಿಪತ್ಯ ನಡೆಯುತ್ತಿದೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಾಗಲೂ ರಾಜ್ಯಗಳ ಅಭಿಪ್ರಾಯ ಕೇಳಲಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಧಾನ ಮಂಡಲದ ಉಭಯ ಸದನದಲ್ಲಿ ಚರ್ಚೆ ಆಗಬೇಕಿತ್ತು. ಆದರೆ, ಈ ವಿಷಯದಲ್ಲಿ ಪ್ರತಿಪಕ್ಷಗಳೊಂದಿಗೆ ಸಮಾಲೋಚನೆಯೇ ಆಗಿಲ್ಲ. ಪ್ರವಾಹ ಸಂತ್ರಸ್ತರಿಗೆ ಈವರೆಗೆ ಪರಿಹಾರ ಕೊಟ್ಟಿಲ್ಲ.

ಕಳೆದ ವರ್ಷ ಮನೆಗಳನ್ನು ಕಳೆದುಕೊಂಡವರಿಗೂ ಹಣ ಸಿಕ್ಕಿಲ್ಲ. ಮುಖ್ಯಮಂತ್ರಿಯವರು ಘೋಷಣೆ ಮಾಡಿರುವ ಕಾರ್ಯಕ್ರಮಗಳಿಗೆ ಹಣ ಇಲ್ಲದಿರುವಾಗ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕನಸಿನ ಮಾತಾಗಿದೆ. ಕೊರೊನಾದಿಂದ ಸಾವಿಗೀಡಾದವರ ಕುಟುಂಬದವರಿಗೆ ತಲಾ ಒಂದು ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಈವರೆಗೆ ಪರಿಹಾರ ವಿತರಣೆ ಆಗಿಲ್ಲ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಅವರ ನೋವಿಗೆ ನಾವು ಸದನದಲ್ಲಿ ಧ್ವನಿಯಾಗುವ ಕೆಲಸ ಮಾಡಬೇಕಿದೆ ಎನ್ನುವುದು ಕಾಂಗ್ರೆಸ್ ನಿಲುವಾಗಿದೆ.

ದಿನಕ್ಕೊಂದು ವಿಚಾರ

ಪ್ರತಿದಿನ ಒಂದು ವಿಚಾರವನ್ನು ಮುಂದಿಟ್ಟು ಚರ್ಚೆಗೆ ಅವಕಾಶ ನೀಡುವಂತೆ, ನಿಲುವಳಿ ಸೂಚನೆ ಮಂಡನೆ, ವಿವಿಧ ನಿಯಮಗಳ ಅಡಿ ಚರ್ಚೆಗೆ ಅವಕಾಶ ಕೋರುವ ಮೂಲಕ ಸರ್ಕಾರವನ್ನು ಸಂಪೂರ್ಣ ಕಟ್ಟಿ ಹಾಕಲು ಸಿದ್ಧತೆ ನಡೆಸಿಕೊಂಡಿದೆ. ಶಾಸಕಾಂಗ ಸಭೆಯಲ್ಲಿ ಸಹ ಹಲವು ವಿಚಾರಗಳ ಚರ್ಚೆ ನಡೆದಿದೆ. ಹಿರಿ-ಕಿರಿಯ ಶಾಸಕರಿಂದ ಸಲಹೆ ಸೂಚನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ.

ಕಾಂಗ್ರೆಸ್ ಶಾಸಕರಿಗೆ ಎದುರಾಗುತ್ತಿರುವ ಸಮಸ್ಯೆ, ಅಭಿವೃದ್ಧಿ ವಿಚಾರದಲ್ಲಿ ಎದುರಾಗಿರುವ ನಿರ್ಲಕ್ಷ್ಯ, ಅನುದಾನ ಕೊರತೆ, ಅನಗತ್ಯ ಹಸ್ತಕ್ಷೇಪ ಸೇರಿದಂತೆ ವಿವಿಧ ವಿಚಾರಗಳ ಕುರಿತು ರಾಜ್ಯ ನಾಯಕರು ಮಾಹಿತಿ ಸಂಗ್ರಹಿಸಿದ್ದಾರೆ.

ಈ ವಿಚಾರವನ್ನೂ ಸದನದಲ್ಲಿ ಪ್ರಸ್ತಾಪಿಸಲು ತೀಮಾನಿಸಿದ್ದಾರೆ. ಇದರ ಜತೆ ಸಚಿವರಾದ ಆರ್.ಅಶೋಕ್, ಬಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಮತ್ತಿತರ ವಿರುದ್ಧ ಕೇಳಿ ಬಂದಿರುವ ಲಂಚ ಸ್ವೀಕಾರ ಆರೋಪವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಡ ಹೇರಲಿದೆ.

ಅಲ್ಲದೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ ಜಿಎಸ್​ಟಿ ಪಾಲನ್ನು ಕೇಳುವಲ್ಲಿ ಸಿಎಂ ವಿಫಲವಾಗಿದ್ದಾರೆ. ಕೇವಲ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿಯೇ ಪ್ರಯತ್ನ ನಡೆಸಿದ್ದಾರೆ. ಸರ್ಕಾರ ಸಮರ್ಥವಾಗಿ ಆಡಳಿತ ನಡೆಸುತ್ತಿಲ್ಲ. ಕೊರೊನಾ ವಿಚಾರದಲ್ಲಿಯೂ ನಿರ್ಲಕ್ಷ್ಯ ಮಾಡುತ್ತಿದೆ. ಕೊರೊನಾದಿಂದ ಮೃತಪಟ್ಟವರ ಲೆಕ್ಕ ಸರಿಯಾಗಿ ನೀಡುತ್ತಿಲ್ಲ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಆಗುತ್ತಿಲ್ಲ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟು ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಪ್ರತಿಪಕ್ಷ ನಾಯಕರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ:ಜೋಗ ಜಲಪಾತಕ್ಕೆ ಪ್ರವಾಸಿಗರ ಲಗ್ಗೆ; ಆರ್‌ಟಿ-ಪಿಸಿಆರ್‌, 2 ಡೋಸ್ ಲಸಿಕೆ ಪಡೆದವರಿಗೆ ಅವಕಾಶ

ABOUT THE AUTHOR

...view details