ಕರ್ನಾಟಕ

karnataka

ETV Bharat / state

ಕೈಬಿಟ್ಟ ಲಿಂಗಾಯತ ಸಮುದಾಯ ಸೆಳೆಯಲು ಪ್ರಯತ್ನ ಆರಂಭಿಸಿದ ಕಾಂಗ್ರೆಸ್! - ಕಾಂಗ್ರೆಸ್ ಲೇಟೆಸ್ಟ್ ನ್ಯೂಸ್

ಸಿಎಂ ಬದಲಾವಣೆ ವಿಚಾರವನ್ನು ಲಿಂಗಾಯತರಿಗೆ ಆಗುತ್ತಿರುವ ಅವಮಾನ ಎಂಬ ರೀತಿ ಬಿಂಬಿಸುವ ಮೂಲಕ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಹೆಣೆಯಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

congress
ಕಾಂಗ್ರೆಸ್

By

Published : Jul 20, 2021, 11:26 AM IST

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ನಾಯಕತ್ವ ಬದಲಾವಣೆ ವಿಚಾರ, ಸಿಎಂ ರಾಜೀನಾಮೆ ನೀಡಲಿದ್ದಾರೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಲಿಂಗಾಯತ ಮತದಾರರನ್ನು ಸೆಳೆಯುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ. ಸಿಎಂ ಬದಲಾವಣೆ ವಿಚಾರವನ್ನು ಲಿಂಗಾಯತರಿಗೆ ಆಗುತ್ತಿರುವ ಅವಮಾನ ಎಂಬ ರೀತಿ ಬಿಂಬಿಸುವ ಮೂಲಕ ಮತದಾರರನ್ನು ಸೆಳೆಯುವ ತಂತ್ರಗಾರಿಕೆಯನ್ನು ಹೆಣೆಯಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಸಿಎಂ ಬಿಎಸ್​ ಯಡಿಯೂರಪ್ಪ

ಲಿಂಗಾಯತ ವೋಟ್ ಬ್ಯಾಂಕ್:

ಈ ಹಿಂದೆ ಕೂಡ ಲಿಂಗಾಯತ ವೋಟ್ ಬ್ಯಾಂಕ್​ಗೆ ಕಣ್ಣು ಹಾಕಿದ್ದ ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸಿದ್ದರೂ ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಇನ್ನಷ್ಟು ನಗೆಪಾಟಲಿಗೀಡಾಗಿತ್ತು. ಇದೀಗ ಬಿಜೆಪಿಯಿಂದ ಯಡಿಯೂರಪ್ಪಗೆ ಅವಮಾನ ಆಗುತ್ತಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಲಿಂಗಾಯತ ಮತದಾರರನ್ನು ಸೆಳೆಯುವ ಯತ್ನಕ್ಕೆ ಮುಂದಾಗಿದೆ.

ಲಿಂಗಾಯತರನ್ನು ಸೆಳೆಯಲು ಅವಕಾಶ:

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಶೇಕಡಾ 90ರಷ್ಟು ಮತದಾರರು ಬಿಜೆಪಿಯತ್ತ ಒಲವು ತೋರಿದ್ದು, ಕಾಂಗ್ರೆಸ್​ಗೆ ಸಾಕಷ್ಟು ಇರಿಸುಮುರುಸು ಉಂಟು ಮಾಡಿತ್ತು. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮತದಾರರ ವರ್ಗವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದ ಕಾಂಗ್ರೆಸ್ಸಿಗೆ ಈಗ ಒಂದು ಸದಾವಕಾಶ ದೊರಕಿದೆ. ಹಲವು ವರ್ಷಗಳಿಂದ ಬಿಜೆಪಿ ವೋಟ್ ಬ್ಯಾಂಕ್ ಆಗಿರುವ ಸಮುದಾಯವನ್ನು ಮತ್ತೆ ಕಾಂಗ್ರೆಸ್​​​ಗೆ ಪಡೆಯುವ ಅವಕಾಶ ದೊರಕಿದೆ.

ಯಡಿಯೂರಪ್ಪಗೆ ಅವಮಾನ ಆಗಿದೆ ಎಂದು ಬಿಂಬಿಸಲಿದ್ದಾರಾ?

ಬಿಜೆಪಿಯಲ್ಲಿ ಯಡಿಯೂರಪ್ಪಗೆ ಅವಮಾನ ಆಗಿದೆ ಎಂದು ಬಿಂಬಿಸಿದರೆ, ಸಹಜವಾಗಿ ಲಿಂಗಾಯತ ಸಮುದಾಯಕ್ಕೆ ಬೇಸರವಾಗುತ್ತದೆ. ಇದರ ಲಾಭ ನಾವು ಪಡೆದುಕೊಳ್ಳಬೇಕು ಎಂಬ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ.

ಡಿಕೆಶಿ-ಸಿದ್ದರಾಮಯ್ಯ

ದಿಲ್ಲಿ ನಾಯಕರನ್ನು ಭೇಟಿಯಾಗಲು ತೆರಳಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಡಿಕೆ ಶಿವಕುಮಾರ್ ಇದೇ ವಿಚಾರವನ್ನು ಹೈಕಮಾಂಡ್ ಮುಂದೆ ಇಡಲು ನಿರ್ಧರಿಸಿದ್ದಾರೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂಬ ವಿಚಾರದಿಂದ ಬೇಸರಗೊಂಡಿರುವ ಮತದಾರರನ್ನು ಸೆಳೆಯುವುದಕ್ಕೆ ಈಗ ಉತ್ತಮ ಕಾಲಾವಕಾಶ ಒದಗಿಬಂದಿದೆ. ಒಮ್ಮೆ ಅವರನ್ನು ಇತ್ತ ಸೆಳೆದರೆ ಮುಂದೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ನಮ್ಮೊಂದಿಗೆ ಇರಿಸಿಕೊಳ್ಳಬಹುದು ಎಂಬ ಚಿಂತನೆ ನಡೆಸಲಾಗಿದೆ.

ಶಾಮನೂರು - ಎಂಬಿಪಿ ಮುಂದಾಳತ್ವ:

ಲಿಂಗಾಯತ ಸಮುದಾಯದ ಮತದಾರರನ್ನು ಸೆಳೆಯುವ ಜವಾಬ್ದಾರಿಯನ್ನು ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಂಬಿ ಪಾಟೀಲ್ ಹೆಗಲಿಗೆ ವಹಿಸಲಾಗಿದೆ. ಇವರು ಈಗಾಗಲೇ ಯಡಿಯೂರಪ್ಪ ಅವರನ್ನು ಬಿಜೆಪಿ ಕೈಬಿಟ್ಟರೆ ಲಿಂಗಾಯತ ಸಮುದಾಯಕ್ಕೆ ಮಾಡಿದ ಅಪಮಾನ ಹಾಗೂ ದ್ರೋಹ ಎಂದೆಲ್ಲ ಬಣ್ಣಿಸುತ್ತಿದ್ದಾರೆ. ಇವರ ಮಾತುಗಳು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಬಹುತೇಕ ಲಿಂಗಾಯತ ನಾಯಕರು ಮತದಾರರನ್ನು ಓಲೈಸುವ ಇಂತಹ ಹೇಳಿಕೆಯನ್ನು ಸರಣಿ ರೂಪದಲ್ಲಿ ನೀಡುವ ಸಾಧ್ಯತೆ ಇದೆ.

ಎಂಬಿಪಿ - ಶಾಮನೂರು ಮುಂದಾಳತ್ವ

ಏಕೈಕ ಅವಕಾಶ:

ಕಳೆದ 40 -50 ವರ್ಷಗಳಿಂದ ಬಿಜೆಪಿ ಪಕ್ಷದ ಸಂಘಟನೆ ಹಾಗೂ ಪ್ರಗತಿಯ ವಿಚಾರದಲ್ಲಿ ಶ್ರಮಿಸುತ್ತಾ ಬಂದಿರುವ ಬಿಎಸ್ ಯಡಿಯೂರಪ್ಪ ಬೆನ್ನಿಗೆ ಸಂಪೂರ್ಣ ಲಿಂಗಾಯತ ಸಮುದಾಯ ನಿಂತಿದೆ. ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವ ಮತದಾರರು ಅವರಿಗೆ ನಿಷ್ಟೆಯಿಂದ ಮತದಾನ ಮಾಡುತ್ತಾ ಬಂದಿದ್ದಾರೆ. ಇದೀಗ ಯಡಿಯೂರಪ್ಪ ನಿವೃತ್ತಿಯಾಗಲಿದ್ದಾರೆ. ಅವರನ್ನು ಬಿಜೆಪಿ ಪಕ್ಷ ಅವಮಾನಿಸಿ ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಿದೆ ಎಂಬ ಹೇಳಿಕೆಗಳ ಮೂಲಕ ಮತದಾರರ ಮನಃ ಪರಿವರ್ತನೆ ಮಾಡುವ ಯತ್ನಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಒಂದೊಮ್ಮೆ ಬಿಜೆಪಿ ಪಕ್ಷ ಸದ್ಯದ ನಿರೀಕ್ಷೆಯಂತೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಅದನ್ನು ಬಳಸಿಕೊಂಡು ಸಮುದಾಯದ ಮತವನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ.

ಇದನ್ನೂ ಓದಿ:ಮಹದಾಯಿಗಾಗಿ ಮತ್ತೆ ಬೀದಿಗಿಳಿಯಲ್ಲಿದ್ದಾರೆ ಉತ್ತರ ಕರ್ನಾಟಕ ಭಾಗದ ಜನತೆ

ಈ ಹಿಂದೆ ಕಾಂಗ್ರೆಸ್ ಪಕ್ಷ ವೀರೇಂದ್ರ ಪಾಟೀಲ್ ವಿಷಯದಲ್ಲಿ ಅವಮಾನಕರ ರೀತಿಯಲ್ಲಿ ವರ್ತಿಸಿತ್ತು. ಆ ಕಾರಣಕ್ಕೆ ಕಾಂಗ್ರೆಸ್ ತ್ಯಜಿಸಿದ್ದ ಲಿಂಗಾಯತ ಮತದಾರರನ್ನು ಮೂರು ದಶಕದ ನಂತರವೂ ವಾಪಸ್ ಸೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಲಿಂಗಾಯತ ಮತ ಗಳಿಸಲು ಕಾಂಗ್ರೆಸ್ ಶತ ಪ್ರಯತ್ನ ಮಾಡುತ್ತಲೇ ಇದೆ. ಇದೀಗ ಯಡಿಯೂರಪ್ಪ ಹೆಸರಿನಲ್ಲಿ ಕಾಂಗ್ರೆಸ್​ಗೆ ಹೊಸ ಅಸ್ತ್ರ ದೊರಕಿದಂತಾಗಿದೆ.

ABOUT THE AUTHOR

...view details