ಬೆಂಗಳೂರು:ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರತಿ ಪಕ್ಷದವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್ಗೆ ಹತ್ತು ಹಲವು ಅನುಕೂಲಗಳು ಲಭಿಸಲಿವೆ. ಹೀಗಾಗಿ ಪಕ್ಷ ಇಲ್ಲಿನ ಗೆಲುವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹಲವು ಕಾರ್ಯ ಯೋಜನೆಯನ್ನು ರೂಪಿಸಿದೆ.
ಉಪಚುನಾವಣೆ ಗೆಲುವಿಗಾಗಿ ಕಾಂಗ್ರೆಸ್ ನಾಯಕರು ಹಗಲಿರುಳು ಶ್ರಮಿಸುತ್ತಿದ್ದು, ಒಂದು ಗೆಲವು ಹಲವು ಯಶಸ್ಸಿಗೆ ಪಾತ್ರವಾಗಲಿದೆ ಎಂಬ ಚಿಂತನೆಯೊಂದಿಗೆ ಪ್ರಚಾರದ ಕಣಕ್ಕಿಳಿದಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಸರ್ಕಾರಕ್ಕೆ ಸೋಲಿನ ರುಚಿ ತೋರಿಸಿದರೆ ಅದು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್ಗೆ ಅನುಕೂಲವಾಗಲಿದೆ ಎನ್ನುವುದು ಪಕ್ಷದ ಮೊದಲ ಆದ್ಯತೆಯಾಗಿದೆ. ಅಲ್ಲದೇ, ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹಾಗಾಗಿ ಇಲ್ಲಿ ಗೆದ್ದರೆ ತಮ್ಮ ಅಧ್ಯಕ್ಷಗಿರಿಯ ಶುಭಾರಂಭದ ಜೊತೆಗೆ ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಡುವ ಮೂಲಕ ತಾವೊಬ್ಬ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಒಕ್ಕಲಿಗ ನಾಯಕ ಎಂಬುದನ್ನು ಬಿಂಬಿಸಿಕೊಳ್ಳುತ್ತಾರೆ. ಇದು ಡಿಕೆಶಿಗೆ ಅನಿವಾರ್ಯ ಕೂಡಾ ಆಗಿದೆ.
ಹಾಗಾಗಿ ಒಕ್ಕಲಿಗ ನಾಯಕರ ದೊಡ್ಡ ತಂಡವನ್ನೇ ಕಟ್ಟಿಕೊಂಡು ಪ್ರಚಾರಕ್ಕಿಳಿದಿರುವ ಡಿಕೆ ಶಿವಕುಮಾರ್ ಅಭ್ಯರ್ಥಿಯನ್ನು ಕೂಡ ಒಕ್ಕಲಿಗ ಸಮುದಾಯದಿಂದಲೇ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಗೆ ಗೆಲುವು ಸಿಕ್ಕರೆ ಅದು ಕೇವಲ ಅಭ್ಯರ್ಥಿಯ ಯಶಸ್ಸು ಮಾತ್ರವಲ್ಲದೇ, ಇಡೀ ಕಾಂಗ್ರೆಸ್ ಪಕ್ಷದ ಮಹತ್ವದ ಗೆಲುವಾಗಲಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷ ತ್ಯಜಿಸಿದ ಮುನಿರತ್ನ ವಿರುದ್ಧ ಗೆಲುವು ಸಾಧಿಸಿದಂತಾಗುತ್ತದೆ. ಜೊತೆಗೆ ತಾನು ಕಳೆದುಕೊಂಡ ಕ್ಷೇತ್ರವನ್ನು ಮರಳಿ ಪಡೆದಂತೆ ಆಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಈ ಉಪಚುನಾವಣೆ ಕದನವನ್ನು ಡಿಕೆ ಸೋದರರು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಸಹಜವಾಗಿ ಅಧ್ಯಕ್ಷರಾಗಿರುವ ಶಿವಕುಮಾರ್ಗೆ ಗೆಲುವು ಸಾಧಿಸುವುದು ಅನಿವಾರ್ಯ ಕೂಡ ಆಗಿದೆ.
ಇನ್ನೂ, ಚುನಾವಣಾ ವೀಕ್ಷಣೆಗೆ ಒಟ್ಟು 58 ಮಂದಿ ವೀಕ್ಷಕರ ತಂಡವನ್ನು ರಚಿಸಿರುವ ಡಿಕೆ ಶಿವಕುಮಾರ್ ಇದರ ನೇತೃತ್ವವನ್ನು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಹಿಸಿದ್ದಾರೆ. ಬೆಂಗಳೂರು ನಗರದ ಪಾಲಿಗೆ ಮತ್ತೋರ್ವ ನಾಯಕ ಹಾಗೂ ಮಾಜಿ ಸಚಿವ ಕೃಷ್ಣ ಬೈರೇಗೌಡ ತಂಡದ ಸಮನ್ವಯಕಾರರಾಗಿದ್ದಾರೆ. ಎಂ. ಕೃಷ್ಣಪ್ಪ, ಶಿವಶಂಕರ್ ರೆಡ್ಡಿ, ಚಲುವರಾಯಸ್ವಾಮಿ ಮತ್ತಿತರ ಒಕ್ಕಲಿಗ ನಾಯಕರನ್ನು ಮುಂಚೂಣಿ ಪ್ರಚಾರಕರರಾಗಿ ನಿಯೋಜಿಸಿ ಕ್ಷೇತ್ರದಲ್ಲಿ ಪ್ರಚಾರ ಮಾಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಸಾಕಷ್ಟು ಪ್ರಬಲವಾಗಿದ್ದ ಜೆಡಿಎಸ್ ಪಕ್ಷದ ನಾಯಕರನ್ನು ಸಹ ಕಾಂಗ್ರೆಸ್ ಸೆಳೆದಿದೆ.