ಬೆಂಗಳೂರು:ವಿಧಾನಸಭೆ ಸಭಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಮಾಜಿ ಸಚಿವ ಯು.ಟಿ.ಖಾದರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ನಿನ್ನೆ (ಸೋಮವಾರ) ತಡ ರಾತ್ರಿ ಪಕ್ಷದ ಮುಖಂಡರು ಈ ತೀರ್ಮಾನ ಕೈಗೊಂಡಿದ್ದು, ಇಂದು ಸ್ಪೀಕರ್ ಸ್ಥಾನಕ್ಕೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ಇಬ್ಬರು ಪಕ್ಷೇತರರು ಸಹ ಬೆಂಬಲ ನೀಡಿದ್ದು ಭಾರಿ ಬಹುಮತ ಹೊಂದಿದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನುಮಾನ. ಹಾಗಾಗಿ, ಯು.ಟಿ.ಖಾದರ್ ಆಯ್ಕೆ ಖಚಿತ ಆಗಿದೆ. ಒಂದೊಮ್ಮೆ ಔಪಚಾರಿಕವಾಗಿ ಸ್ಪರ್ಧೆಗಾಗಿ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಸೋಲು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಯು.ಟಿ.ಖಾದರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಬೆಳಗ್ಗೆ 11 ಗಂಟೆಗೆ ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ.ಖಾದರ್ ನಾಮಪತ್ರ ಸಲ್ಲಿಸಲಿದ್ದಾರೆ. ಮೇ 24 ರಂದು ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಮಂಗಳವಾರ ಮಧ್ಯಾಹ್ನ 12ರ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ ಎಂದು ವಿಧಾನಸಭೆ ಬುಲೆಟಿನ್ ಹೊರಡಿಸಿದೆ.
ಅತ್ಯಂತ ಹಿರಿಯ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಸದ್ಯ ಹಳಿಯಾಳ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಇವರನ್ನೇ ಪೂರ್ಣಾವಧಿ ಸ್ಪೀಕರ್ ಆಗಿ ನೇಮಿಸುವ ಕಾಂಗ್ರೆಸ್ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ದೇಶಪಾಂಡೆ ಹಿಂದೇಟು ಹಾಕಿದ್ದು ಸಚಿವ ಸ್ಥಾನದತ್ತ ಕಣ್ಣು ನೆಟ್ಟಿದ್ದಾರೆ. ಅದೇ ರೀತಿ ಹೆಚ್.ಕೆ.ಪಾಟೀಲ್ ಹಾಗೂ ಬಿ.ಆರ್.ಪಾಟೀಲ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಇವರ್ಯಾರು ಸ್ಪೀಕರ್ ಸ್ಥಾನದಲ್ಲಿ ಕೂರಲು ಒಪ್ಪದ ಹಿನ್ನೆಲೆಯಲ್ಲಿ ಅಂತಿಮವಾಗಿ ಯುವ ನಾಯಕ ಯು.ಟಿ.ಖಾದರ್ ಅವರಿಗೆ ಮಣೆ ಹಾಕಲಾಗಿದೆ.