ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ರಾಜ್ಯ, ರಾಷ್ಟ್ರ ಚುನಾವಣೆಯಲ್ಲಿ ಉತ್ತಮ ಫಲಿತಾಂಶ: ಉಗ್ರಪ್ಪ - ಈಟಿವಿ ಭಾರತ ಕನ್ನಡ

ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಇನ್ನು ಮುಂದೆ ಕಾಂಗ್ರೆಸ್​ ಪಕ್ಷವು ಇವರ ನೇತೃತ್ವದಲ್ಲಿ ರಾಷ್ಟ್ರ ಮತ್ತು ರಾಜ್ಯ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಮಾಜಿ ಸಂಸದ ವಿ ಎಸ್​​ ಉಗ್ರಪ್ಪ ಹೇಳಿದರು.

congress-party-will-get-good-results-in-election-says-vs-ugrappa
ಕಾಂಗ್ರೆಸ್ ಪಕ್ಷ ಮುಂದಿನ ರಾಜ್ಯ ಹಾಗೂ ರಾಷ್ಟ್ರ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದೆ: ಉಗ್ರಪ್ಪ

By

Published : Oct 26, 2022, 4:38 PM IST

ಬೆಂಗಳೂರು: ಕಾಂಗ್ರೆಸ್​ ಪಕ್ಷವು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಹಾಗೂ ಸೋನಿಯಾ ಗಾಂಧಿ ಮತ್ತಿತರ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಬಲಿಷ್ಠವಾಗಿ ಬೆಳೆದು ಮುಂದಿನ ರಾಜ್ಯ ಹಾಗೂ ರಾಷ್ಟ್ರ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಅವರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಇಂದಿನಿಂದ ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಹಿರಿಯ ಅನುಭವಿ ರಾಜಕಾರಣಿ, ಅತ್ಯಂತ ಪ್ರಮುಖ ಸಂಸದೀಯ ಪಟು ಹಾಗೂ ಪಕ್ಷ ನಿಷ್ಠೆಯಲ್ಲಿ ಹೆಸರು ಮಾಡಿರುವಂತಹ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಭಾರತ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಜನಸೇವೆ ಮಾಡಿಕೊಂಡು ಬಂದಿರುವ ಅತ್ಯಂತ ಹಿರಿಯ ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ. ಮತ್ತೊಂದೆಡೆ ಸರ್ವಾಧಿಕಾರಿ ಪ್ರವೃತ್ತಿ, ನಾಥುರಾಮ್ ಗೋಡ್ಸೆ ಅವರ ವಿಚಾರಧಾರೆಯಲ್ಲಿ ನಂಬಿಕೆ ಇಟ್ಟಿರುವಂತಹ ಮೋದಿಯವರು. ಆರ್ಥಿಕತೆ ನಿರುದ್ಯೋಗ ಸಮಸ್ಯೆ ಬಡತನ ನಿರ್ಮೂಲನೆ ಸೇರಿದಂತೆ ಎಲ್ಲಾ ವಿಚಾರದಲ್ಲಿ ನರೇಂದ್ರ ಮೋದಿಯವರು ವೈಫಲ್ಯ ಅನುಭವಿಸಿದ್ದಾರೆ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.

ವಾಲ್ಮೀಕಿ ಸಮುದಾಯದ ಕಡೆಗಣನೆ: ನಮ್ಮ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಮೊನ್ನೆ ಮೋದಿ ಅವರು ಮಾಡಿದ ಭಾಷಣದಲ್ಲಿ ಪ್ರಪಂಚಕ್ಕೆ ರಾಮಾಯಣವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ಭಾಗದಲ್ಲಿ ಹಾಗೂ ರಾಜ್ಯದಲ್ಲಿ ವಾಲ್ಮೀಕಿ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇವರ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ. ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಸ್ಮಾರಕ ನಿರ್ಮಾಣ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಕೋಮು ಸಂಘರ್ಷ ಬಗ್ಗೆ ಸರ್ಕಾರದ ನಿರ್ಲಕ್ಷ್ಯ: ಶಿವಮೊಗ್ಗದಲ್ಲಿ ಮತ್ತೆ ಕೋಮು ಸಂಘರ್ಷ ಆರಂಭವಾಗಿದೆ. ಈ ರಾಜ್ಯದಲ್ಲಿ ಸರ್ಕಾರ ಆಡಳಿಸುತ್ತಿದೆಯೇ ಅಥವಾ ಇಲ್ಲವೇ? ರಾಜ್ಯದಲ್ಲಿ ಗುಪ್ತಚರ ಇಲಾಖೆ ಬದುಕಿದೆಯೋ ಅಥವಾ ಸತ್ತಿದಿಯೋ ಎಂದು ಕೇಳಲು ಬಯಸುತ್ತೇನೆ. ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಲು ಸರ್ಕಾರ ವಿಫಲವಾಗಿರುವುದು ಏಕೆ? ಗಲಾಟೆಗಳಾಗಲಿ ಎಂಬ ಉದ್ದೇಶದಿಂದಲೇ ಈ ರೀತಿ ನಿರ್ಲಕ್ಷ ಸರ್ಕಾರ ವಹಿಸುತ್ತಿದೆಯೇ? ಎಂದು ಕೇಳಿದರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆನಂದ್ ಸಿಂಗ್ ಅವರು ಮಾಡಿರುವ ಕಾರ್ಯಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬರಲು ಕೋಟ್ಯಂತರ ರೂಪಾಯಿ ಹಣ ಪಡೆದು ಪಕ್ಷಾಂತರ ಮಾಡಿ ಇಂದು ಸಚಿವರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮತ್ತೆ ತಮಗೆ ಜನ ದೇಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಹೊಸ ಪ್ರಯೋಗ ಮಾಡುತ್ತಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ ನಗರಸಭೆ, ಕಮಲಾಪುರ ಪಟ್ಟಣ, ಹೊಸಪೇಟೆ ತಾಲೂಕು ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿಯ ಒಟ್ಟು 40 ಸದಸ್ಯರುಗಳಿಗೆ ದೀಪಾವಳಿ ಉಡುಗೊರೆಯನ್ನು ನೀಡಿದ್ದಾರೆ.

ಆನಂದ್​ ಸಿಂಗ್​ ವಿರುದ್ಧ ಕ್ರಮಕ್ಕೆ ಒತ್ತಾಯ :ಆನಂದ್ ಸಿಂಗ್ ಅವರು ಈ ಉಡುಗೊರೆ ನೀಡಿದ್ದಾರೆ ಎಂಬುದಕ್ಕೆ ಸಾಕ್ಷಿ ಏನಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ, 'ಈ ಬಗ್ಗೆ ಪ್ರಮುಖ ಮಾಧ್ಯಮಗಳಲ್ಲಿ ವರದಿ ಬಂದಿವೆ. ಇದು ಕಾನೂನಿನ ಉಲ್ಲಂಘನೆಯಾಗಿದ್ದು, ಇಂದು ಆನಂದ್ ಸಿಂಗ್ ಅವರು ಜನಪ್ರತಿನಿಧಿಗಳನ್ನು ಖರೀದಿಸಲು ಮುಂದಾಗಿದ್ದಾರೆ. ಮೂಲಕ ವಿಜಯನಗರ ಮತದಾರರ ಸ್ವಾಭಿಮಾನ ಖರೀದಿ ಮಾಡಲು ಆನಂದ್ ಸಿಂಗ್ ಪ್ರಯತ್ನಿಸಿದ್ದಾರೆ. ಆನಂದ್ ಸಿಂಗ್ ಅವರೇ ಕೆಲವು ದಿನಗಳ ಹಿಂದೆ ನೀವು ಪರಿಶಿಷ್ಟ ಜಾತಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ನಿಮ್ಮ ಮೇಲೆ ದಾಖಲಾಗಿದೆ. ಈಗ ಈ ರೀತಿಯ ಅಂಶಗಳನ್ನು ನೀಡಿ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದೀರಿ. ನಿಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇದ್ದರೆ ನೀವು ಜನತೆಯ ಮುಂದೆ ಬೇಷರತ್​ ಕ್ಷಮೆ ಕೋರಬೇಕು. ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ :ರಾಹುಲ್ ಪಾದಯಾತ್ರೆಗೆ ಬಲ ತುಂಬಿದ ಮೈತ್ರಿ ಪಕ್ಷಗಳ ಬೆಂಬಲ

ABOUT THE AUTHOR

...view details