ಬೆಂಗಳೂರು:ಶನಿವಾರ ನಡೆಯುವ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ವಿವಿಧೆಡೆಗಳಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕರು 2013ರಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಂತೆ ಈ ಸಾರಿಯೂ ಕಾಂಗ್ರೆಸ್ ಅಧಿಕಾರದ ಗದ್ದುಗೆ ಇರಲಿದೆ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಡಿಸಿಎಂ ಹಾಗೂ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಮಾತನಾಡಿ, ನಾವು 130 ಸ್ಥಾನ ಗೆಲ್ಲುತ್ತೇವೆ. ಸಮೀಕ್ಷೆ ಆಧಾರವಾಗಿ ಹೇಳುತ್ತಿಲ್ಲ. ಜಿಲ್ಲಾವಾರು ಪಡೆದ ಮಾಹಿತಿ ಅಧಾರಿತವಾಗಿ ಹೇಳುತ್ತಿದ್ದೇವೆ. ಸ್ವಂತ ಬಲದಿಂದ ನಾವು ಸರ್ಕಾರ ರಚನೆ ಮಾಡ್ತೇವೆ ಎಂದರು.
ಖರ್ಗೆಯವರ ಜೊತೆ ರಾಜಕೀಯ ಮಾತಾಡಿಲ್ಲ. ವೈಯಕ್ತಿಕವಾಗಿ ಮಾತುಕತೆ ಮಾಡಿದ್ದೇವೆ. ಸಿಎಂ ಆಯ್ಕೆ ಬಗ್ಗೆ ನಾನು ಮಾತಾಡುವುದಿಲ್ಲ. ಪದೇ ಪದೆ ನಾವು ಹೇಳಿಕೆ ಕೊಡುವುದರಿಂದ ಗೊಂದಲ ಸೃಷ್ಟಿ ಆಗುತ್ತದೆ. ಹೈಕಮಾಂಡ್ ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡ್ತಾರೆ. ನಮ್ಮ ಎಚ್ಚರಿಕೆಯಲ್ಲಿ ನಾವು ಇರುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯಲಿದೆ:ಕಪ್ಪು ನಮ್ದೆ ಎಂಬ ಸಚಿವ ಆರ್ ಅಶೋಕ್ ಹೇಳಿಕೆ ವಿಚಾರಕ್ಕೆ ವಂಗ್ಯವಾಡಿರುವ ಸಂಸದ ಡಿ ಕೆ ಸುರೇಶ್, ಕಪ್ಪು ಈಗಲೂ ಅವರದ್ದೇ. ಮುಂದಕ್ಕೆ ನಮ್ಮದು. ಎಲ್ಲವೂ ಸುರ್ಜೇವಾಲ ಹೇಳ್ತಾರೆ ಎಂದಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಇನ್ನು ಒಂದು ದಿನ ಮಾತ್ರ ಬಾಕಿಯಿದೆ. ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ. ಸ್ಥಿರ ಸರ್ಕಾರ ರಚನೆಯ ಬಗ್ಗೆ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯಲಿದೆ. ಬಿಜೆಪಿ, ಜೆಡಿಎಸ್ನವರು ನಮಗೆ ಬಹುಮತ ಅಂತಾರೆ. ಆದರೆ ನಾವು ಜನರ ಮುಂದೆ ಹೋಗಿದ್ದೇವೆ. ಜನ ಉತ್ತಮ ಸರ್ಕಾರವನ್ನ ಬೆಂಬಲಿಸ್ತಾರೆ. ಬಿಜೆಪಿ ವಿರುದ್ಧ ಜನ ಸಿಡಿದು ನಿಂತಿದ್ದಾರೆ ಎಂದಿದ್ದಾರೆ.
ನಮಗೆ ಯಾವುದೇ ಆಪರೇಷನ್ ಆತಂಕವಿಲ್ಲ: ಕಪ್ ನಮ್ದೆ ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಅಧರ್ಮದ ಸರ್ಕಾರ ರಚನೆಗೆ ಅವರು ಮುಂದಿದ್ದಾರೆ. ಕೆಟ್ಟ ಕೆಲಸ ಮಾಡೋದ್ರಲ್ಲಿ ನಿಸ್ಸೀಮರು. ಅದಕ್ಕೆ ನಿಮಗೆ ಅವಕಾಶ ಕೊಡ್ತೇವೆ ಅಂತ ಹೇಳ್ತಿರಬಹುದು. ನೀತಿ, ನಿಯಮ ಇಲ್ಲದ ಪಕ್ಷ ಅಂದ್ರೆ ಬಿಜೆಪಿ. ನಮಗೆ ಯಾವುದೇ ಆಪರೇಷನ್ ಆತಂಕವಿಲ್ಲ. ಖರ್ಗೆ, ಸುರ್ಜೇವಾಲಾ ಇಲ್ಲೇ ಇದ್ದಾರೆ. ನಮಗೆ ಸ್ಪಷ್ಟಬಹುಮತದ ವಿಶ್ವಾಸವಿದೆ ಎಂದರು.
ಸಿಎಂ ಯಾರಾಗ್ತಾರೆಂಬ ವಿಚಾರಕ್ಕೆ, ಶಾಸಕರ ಅಭಿಪ್ರಾಯ ಸಂಗ್ರಹಿಸಿ ಸಿಎಂ ಆಯ್ಕೆಯಾಗಲಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮೈತ್ರಿಗೆ ರೆಡಿ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಎಕ್ಸಿಟ್ ಪೋಲ್ ವರದಿ ಒಪ್ಪಲ್ಲ, ಬಿಜೆಪಿ ಸರ್ಕಾರವೇ ರಚನೆಯಾಗಲಿದೆ: ರವಿಕುಮಾರ್