ಬೆಂಗಳೂರು: ಬಿಜೆಪಿ ಕಳ್ಳರು, ಸುಳ್ಳರು, ಭ್ರಷ್ಟರು ಮತ್ತು ರೌಡಿಗಳಿಗೆ ಸೂರು ಕಲ್ಪಿಸಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಸರಣಿ ಟ್ವೀಟ್ ಮಾಡಿ ಬಿಜೆಪಿ ಪಕ್ಷದ ವಿರುದ್ಧ ಲೇವಡಿ ಮಾಡಿರುವ ಕಾಂಗ್ರೆಸ್, ವಾಂಟೆಡ್ ಲಿಸ್ಟ್‌ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ. ಆದರೆ ಬಿಜೆಪಿ ನಾಯಕರ ಜೊತೆಯಲ್ಲಿರುತ್ತಾನೆ. ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳು ಎಲ್ಲರಿಗೂ ಒಂದೇ ಸೂರು - ಬಿಜೆಪಿ. ಪೊಲೀಸರು ಹುಡುಕುತ್ತಿದ್ದ ರೌಡಿಯ ಜೊತೆಗೆ ನಿಮ್ಮ ನಾಯಕರಿಗೆ ಏನು ಕೆಲಸ? ಆತನ ಬಂಧನ ಆಗದಿರುವ ಹಿಂದೆ ಬಿಜೆಪಿ ಕೈವಾಡವಿದೆಯೇ? ಎಂದು ಪ್ರಶ್ನಿಸಿದೆ.
ಕ್ರಿಮಿನಲ್‌ಗಳೊಂದಿಗೆ ಬಿಜೆಪಿಯ ನೆಂಟಸ್ತಿಕೆ ಇರುವಾಗ ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಏರದಿರುತ್ತದೆಯೇ? ಆರಗ ಜ್ಞಾನೇಂದ್ರ ಅವರೇ, ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ? ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ರಾಜ್ಯ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ?
ಬಿಜೆಪಿಯ ಕೃಪಾಕಟಾಕ್ಷದಿಂದ ಸೈಲೆಂಟ್ ಸುನೀಲ್ ಎಂಬ ರೌಡಿಯ ಮುಂದೆ ಈಗ ಪೊಲೀಸರೇ ಸೈಲೆಂಟ್. ಆರಗ ಜ್ಞಾನೇಂದ್ರ ಅವರೇ ಸೈಲೆಂಟ್ ಸುನೀಲನಿಗೆ ಪೊಲೀಸರು ಹುಡುಕುತ್ತಿರಲಿಲ್ಲವೇ? ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರಿರಲಿಲ್ಲವೇ? ಬಂಧಿಸದಂತೆ ತಡೆದವರು ಯಾರು? ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ? ಎಂದಿದೆ.