ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.ಈ ಸಂಬಂಧ ಇಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಆರೋಪಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾತುಗಳನ್ನು ಕೋಟ್ ಮಾಡಿ ಟ್ವೀಟ್ ಮಾಡಲಾಗಿದೆ.
ದಿನೇಶ್ ಗುಂಡೂರಾವ್ ಪ್ರತಿಕ್ರಿಯೆಯಾಗಿ, ಅಕ್ರಮ ಮಾಡಿರುವವರು ಬಿಜೆಪಿ ಸೇರಿದರೆ ಸಾಚಾಗಳಾಗುತ್ತಾರೆ. ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಲಾಗುವುದಿಲ್ಲ. ಡಿಕೆ ಶಿವಕುಮಾರ್ ಅವರಿಗೂ ಬಿಜೆಪಿ ಸೇರಲು ಒತ್ತಡ ಹಾಕಲಾಗಿದೆ. ಆದರೆ, ಅವರು ನಿರಾಕರಿಸಿದ ಬಳಿಕ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಅವರು ಕಾನೂನು ಹೋರಾಟ ಮಾಡುತ್ತಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದಿರುವ ಮಾತನ್ನು ಟ್ವೀಟ್ ರೂಪದಲ್ಲಿ ಪ್ರಕಟಿಸಲಾಗಿದೆ.
ರಾಹುಲ್ ಮಾತು
ಡಿಕೆ ಶಿವಕುಮಾರ್, ಅವರ ಬಂಧನವು ಕೇಂದ್ರ ಸರ್ಕಾರದ ಪ್ರತೀಕಾರದ ರಾಜಕಾರಣವಾಗಿದೆ. ಸರ್ಕಾರದ ವಿಫಲ ನೀತಿಗಳಿಂದ ಹಾಗೂ ದೇಶದ ಶೋಚನೀಯ ಆರ್ಥಿಕ ಪರಿಸ್ಥಿತಿಯಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಇದು. ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುವುದನ್ನು ಬಿಟ್ಟರೆ ಜಾರಿ ನಿರ್ದೇಶನಾಲಯಕ್ಕೆ ಇನ್ನೇನು ಮಾಡಲು ಸಾಧ್ಯ? ಎಂದಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾಹಿತಿಯನ್ನು ಪ್ರಕಟಿಸಲಾಗಿದೆ.