ಬೆಂಗಳೂರು/ಧಾರವಾಡ:ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಲು ಸತಾಯಿಸುತ್ತಿರುವ ಬಿಜೆಪಿ ಹೈಕಮಾಂಡ್ ನಿಲುವಿನಿಂದ ಬೇಸತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಹಿರಿಯ ಲಿಂಗಾಯತ ಸಮುದಾಯದ ಮುಖಂಡರಾದ ಜಗದೀಶ್ ಶೆಟ್ಟರ್ ಅವರನ್ನು ಸೆಳೆಯಲು ಕಾಂಗ್ರೆಸ್ ಪಕ್ಷ "ಆಪರೇಷನ್ ಹಸ್ತ" ನಡೆಸಿದೆ.
ಬೆಳಗಾವಿ ಜಿಲ್ಲೆಯ ಪ್ರಭಾವಶಾಲಿ ಮುಖಂಡರಾದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಸೆಳೆದ ಮಾದರಿಯಲ್ಲಿಯೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂಬಂಧ ಸರ್ವ ರೀತಿಯ ಪ್ರಯತ್ನವನ್ನು ಪಕ್ಷದ ಮುಖಂಡರು ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಜಗದೀಶ್ ಶೆಟ್ಟರ್ಗೆ ಟಿಕೆಟ್ ಸಿಗುತ್ತೆ ಅನ್ನೋ ವಿಶ್ವಾಸ ಇದೆ: ಪ್ರಹ್ಲಾದ್ ಜೋಶಿ
ಭಾರತೀಯ ಜನತಾ ಪಕ್ಷವು ಹಿರಿಯ ಮುಖಂಡರಾದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡದೇ ಅವಮಾನಿಸುತ್ತಿರುವುದನ್ನು ಮನಗಂಡ ಕಾಂಗ್ರೆಸ್ ಪಕ್ಷದ ನಾಯಕರುಗಳು ಜಗದೀಶ್ ಶೆಟ್ಟರ್ ಅವರಿಗೆ ಪಕ್ಷಕ್ಕೆ ಸೇರಲು ಆಫರ್ ನೀಡಿದ್ದಾರೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷದ ಲಿಂಗಾಯತ ಸಮುದಾಯದ ಹಿರಿಯ ಮುಖಂಡರಾದ ಹಾಗೂ ಶೆಟ್ಟರ್ ಕುಟುಂಬದ ಬೀಗರೂ ಆಗಿರುವ ಶಾಮನೂರು ಶಿವಶಂಕರಪ್ಪ , ಮಾಜಿ ಸಚಿವ ಎಚ್ ಕೆ ಪಾಟೀಲ್, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ಶೆಟ್ಟರ್ ಜೊತೆ ತಮ್ಮದೇ ಆದ ನೆಟ್ ವರ್ಕ್ ಮೂಲಕ ಸಂಪರ್ಕ ಸಾಧಿಸಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮನವೊಲಿಸಲು ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ನಾಳೆ ಟಿಕೆಟ್ ಘೋಷಣೆ ಆಗದೇ ಹೋದ್ರೆ, ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ: ಶೆಟ್ಟರ್ ಎಚ್ಚರಿಕೆ
ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ತಮಗೆ ಪಕ್ಷದ ಟಿಕೆಟ್ ನೀಡಲೇಬೇಕೆಂದು ಪಟ್ಟು ಹಿಡಿದಿರುವ ಜಗದೀಶ್ ಶೆಟ್ಟರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ತಮಗೆ ಟಿಕೆಟ್ ನೀಡಲೇಬೇಕು, ಬೇರೆ ಯಾರಿಗೂ ಟಿಕೆಟ್ ನೀಡುವುದನ್ನು ತಾವು ಒಪ್ಪುವುದಿಲ್ಲ. ನಮ್ಮ ಕುಟುಂಬದವರಿಗೆ ಸಹ ಟಿಕೆಟ್ ನೀಡುವುದಕ್ಕೆ ಸಮ್ಮತಿ ಇಲ್ಲವೆನ್ನುವುದನ್ನು ಸ್ಪಷ್ಟಪಡಿಸಿ ಬಂದಿದ್ದಾಗಿ ಶೆಟ್ಟರ್ ಅವರು ತಿಳಿಸಿದ್ದರು.
12 ಜನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಲಿದೆ-ಸಿಎಂ ಬೊಮ್ಮಾಯಿ: ಈ ಬೆಳವಣಿಗೆಯ ನಡುವೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಹ ಜಗದೀಶ್ ಶೆಟ್ಟರ್ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷವನ್ನು ಸೇರುವಂತೆ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ. ಜಗದೀಶ್ ಶೆಟ್ಟರ್ ಅವರು ಶನಿವಾರ ಬೆಳಗ್ಗೆ ಅಭಿಮಾನಿಗಳ ಸಭೆ ಕರೆದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಹೈಕಮಾಂಡ್ ಎರಡು ದಿನದಲ್ಲಿ 12 ಜನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಶೆಟ್ಟರ್ ಕ್ಷೇತ್ರಕ್ಕೆ ಟಿಕೆಟ್ ಘೋಷಿಸದ ಕಾಂಗ್ರೆಸ್:ಈ ನಡುವೆ ಶನಿವಾರ 49 ಅಭ್ಯರ್ಥಿಗಳ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಆಗಿದ್ದು, ಶೆಟ್ಟರ್ ಶಾಸಕರಾಗಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿಲ್ಲ. ಹೀಗಾಗಿ ಒಂದು ವೇಳೆ ಬಿಜೆಪಿಯಿಂದಲೂ ಟಿಕೆಟ್ ಸಿಗದಿದ್ದರೆ, ಶೆಟ್ಟರ್ ಅವರ ಮುಂದಿನ ನಿರ್ಧಾರಕ್ಕಾಗಿ ಕಾಂಗ್ರೆಸ್ ಕಾಯುತ್ತಿದೆಯಾ ಎಂಬ ಪ್ರಶ್ನೆ ಮೂಡಿಸಿದೆ.
ಇದನ್ನೂ ಓದಿ:ಶೆಟ್ಟರ್ ಸಭೆ ಬಗ್ಗೆ ಗೊತ್ತಿದೆ..2 ದಿನದಲ್ಲಿ ಮೂರನೇ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ