ಬೆಂಗಳೂರು:ಬಸವನಗುಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಗೊಂದಲವನ್ನು ಕೈ ನಾಯಕರು ಬಗೆಹರಿಸಿದ್ದಾರೆ. ನಿನ್ನೆ ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವನಗುಡಿ ಕ್ಷೇತ್ರದಲ್ಲಿ ಬಹುತೇಕ ಯುಬಿ ವೆಂಕಟೇಶ್ ಗೆ ಟಿಕೇಟ್ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿಂದ ಟಿಕೇಟ್ ಗೆ ಭಾರಿ ಪೈಪೋಟಿ ನೀಡಿದ್ದ ಡಾ.ಶಂಕರ್ ಗುಹಾರನ್ನು ಮನವೊಲಿಸುವಲ್ಲಿ ರಾಜ್ಯ ನಾಯಕರು ಸಫಲರಾಗಿದ್ದಾರೆ ಎಂಬ ಮಾಹಿತಿ ಇದೆ.
ನಿನ್ನೆಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉಬಯ ನಾಯಕರನ್ನೂ ಸಭೆಗೆ ಆಹ್ವಾನಿಸಿ ಮನವೊಲಿಸುವ ಯತ್ನ ಮಾಡಿದ್ದಾರೆ. ಈಗಾಗಲೇ ಬಸವನಗುಡಿ ವ್ಯಾಪ್ತಿಯಲ್ಲಿ ಹಲವು ಸಾಮಾಜಿಕ ಸೇವೆ ಸಲ್ಲಿಸಿರುವ ಯು.ಬಿ. ವೆಂಕಟೇಶ್ ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಹಣ ಕಳೆದುಕೊಂಡ ಗ್ರಾಹಕರ ಪರವಾಗಿ ಹೋರಾಡುತ್ತಿದ್ದಾರೆ. ಬಹುತೇಕ ಬ್ರಾಹ್ಮಣ ಸಮುದಾಯದವರೇ ಈ ಬ್ಯಾಂಕ್ ನಿಂದ ವಂಚನೆಗೆ ಒಳಗಾಗಿದ್ದು, ಇವರ ಪರ ದನಿ ಎತ್ತಿ ವೆಂಕಟೇಶ್ ಹಲವರ ಹೃದಯ ಗೆದ್ದಿದ್ದಾರೆ ಎಂಬ ಮಾತಿದೆ.
ಶಂಕರ್ ಗುಹಾ ಸಹ ಸ್ಥಳೀಯವಾಗಿ ಒಂದಿಷ್ಟು ಜನಪ್ರಿಯತೆ ಹೊಂದಿದವರು, ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಿಸಿದ್ದರು. ಟಿಕೆಟ್ ಇವರಿಗೆ ಸಿಗಲಿದೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ತಂದೆ ರಾಮಚಂದ್ರ ಗುಹಾ ಅವರ ಜನಪ್ರಿಯತೆ ಹಾಗೂ ಪ್ರಭಾವದ ಜತೆಗೆ ಶಂಕರ್ ಸಹ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದರು. ಆದರೆ, ಇವರ ಜನಪ್ರಿಯತೆಯ ಮಟ್ಟ ಮೂರು ಬಾರಿ ಕ್ಷೇತ್ರದಲ್ಲಿ ಗೆದ್ದಿರುವ ಬ್ರಾಹ್ಮಣ ಸಮುದಾಯದವರೇ ಆದ ರವಿ ಸುಬ್ರಹ್ಮಣ್ಯಗೆ ಸಮನಾಗಿಲ್ಲ ಎನ್ನುವುದನ್ನು ಅರಿತ ಕಾಂಗ್ರೆಸ್ ನಾಯಕರು ಯು.ಬಿ. ವೆಂಕಟೇಶ್ಗೆ ಮಣೆ ಹಾಕಲು ಮುಂದಾಗಿದ್ದಾರೆ. ಯುವಕರಾಗಿರುವ ಶಂಕರ್ಗೆ ಮುಂದಿನ ಅವಧಿಗೆ ಅವಕಾಶ ನೀಡುವ ಭರವಸೆ ಕೊಡಲಾಗಿದೆಯಂತೆ.
ಯುಬಿ ವೆಂಕಟೇಶ್ ಗೆ ಈ ಬಾರಿ ಅವಕಾಶ ನೀಡುವುದಾಗಿ ನಿರ್ಧಾರ ಮಾಡಿದ್ದು, ಡಾ.ಶಂಕರ್ ಗುಹಾಗೆ ಬೆನ್ನು ತಟ್ಟಿ ಮುಂದೆ ಅವಕಾಶ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಈ ಬಾರಿ ಯುಬಿ ವೆಂಕಟೇಶ್ ಗೆ ಸಹಕಾರ ನೀಡುವಂತೆ ಶಂಕರ್ ಗುಹಾಗೆ ಸೂಚನೆ ನೀಡಲಾಗಿದ್ದು, ಅವರು ಒಪ್ಪಿದ್ದಾರೆ ಎಂಬ ಮಾಹಿತಿ ಇದೆ.