ಬೆಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್, ರಾಜ್ಯದ ಮತ್ತು ದೇಶದ ಕ್ಷಮೆ ಕೋರಬೇಕು ಎಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜಾಹೀರಾತು ನೀಡಿದ್ದ ಕಾಂಗ್ರೆಸ್‍ಗೆ ಚುನಾವಣಾ ಆಯೋಗ ಆರೋಪಗಳಿಗೆ ಪೂರಕವಾಗಿ ಸಾಕ್ಷ್ಯಗಳನ್ನು ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್‍ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸುಳ್ಳು ಆರೋಪಗಳನ್ನು ಮಾಡಿದ ತಪ್ಪಿಗೆ ಕಾಂಗ್ರೆಸ್ ತಕ್ಷಣವೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‍ನ ಶ್ರೀಮಂತರು, ರಾಜಕೀಯ ಪ್ರಭಾವ ಹಿನ್ನೆಲೆಯವರು ಮುಖ್ಯಮಂತ್ರಿಯಾಗುತ್ತಾರೆ. ಆದರೆ, ಬಿಜೆಪಿಯಲ್ಲಿ ಸಾಮಾನ್ಯರೂ ಮುಖ್ಯಮಂತ್ರಿಗಳಾಗುತ್ತಾರೆ. ಬಿಜೆಪಿಯ ಹಲವಾರು ಮುಖ್ಯಮಂತ್ರಿಗಳು ಶ್ರೀಮಂತರಲ್ಲ. ರಾಜಕೀಯ ಹಿನ್ನೆಲೆಯವರೂ ಅಲ್ಲ ಎಂದು ಹೇಳಿದರು.
ತನಿಖೆ ಆಗದಂತೆ ಸರ್ಕಾರ ನೋಡಿಕೊಂಡಿತು: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕು. ಸಿದ್ದರಾಮಯ್ಯ ಸರ್ಕಾರದಲ್ಲಿ ಲೋಕಾಯುಕ್ತ ಮುಚ್ಚಿ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಲಾಯಿತು. ಎಸಿಬಿಯಲ್ಲಿ ದಾಖಲಾದ 50 ಪ್ರಕರಣಗಳಲ್ಲಿ ಎಫ್‍ಐಆರ್ ಹಾಕಲು ಬಿಡದೆ, ತನಿಖೆ ಆಗದಂತೆ ಸರ್ಕಾರ ನೋಡಿಕೊಂಡಿತು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವರದಿಯನ್ನು ಬಿಡುಗಡೆ ಮಾಡಲೇ ಇಲ್ಲ:ಅರ್ಕಾವತಿ ಬಡಾವಣೆ ಯೋಜನೆಯಲ್ಲಿ 875 ಎಕರೆ ಜಾಗವನ್ನು ಡಿನೋಟಿಫಿಕೇಷನ್ ಮಾಡಲಾಯಿತು. 35 ಸಾವಿರ ಕೋಟಿ ರೂ. ಹಗರಣ ಇದಾಗಿದ್ದು, 2013-18ರವರೆಗೆ ನಗರ ಪ್ರದೇಶದಲ್ಲಿ ಜಮೀನು ಖರೀದಿಸುವಲ್ಲಿ 35 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಸಿಎಜಿ ವರದಿ ಹೇಳಿದೆ. ಕೆಂಪಯ್ಯ ಆಯೋಗ ಸಮಿತಿ ಸಹ ಅಕ್ರಮಗಳು ನಡೆದಿವೆ ಎಂದು ಹೇಳಿತ್ತು. ಆದರೆ, ವರದಿಯನ್ನು ಬಿಡುಗಡೆ ಮಾಡಲೇ ಇಲ್ಲ. ಸರ್ಕಾರದ ಯೋಜನೆಗಳಲ್ಲಿ 1 ರೂ. ಹಣದಲ್ಲಿ 85 ಪೈಸೆ ಮಾತ್ರ ಜನರಿಗೆ ತಲುಪುತ್ತಿದೆ ಎಂದು ಅಂದಿನ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಶೇ 40ರಷ್ಟು ಕಮೀಷನ್ ಪಡೆಯುತ್ತಿದೆ ಎಂದು ಕಾಂಗ್ರೆಸ್, ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೆ ಪತ್ರ ಬರೆದಿತ್ತು. ಆದರೆ, ಕಾಂಗ್ರೆಸ್ ಈ ಬಗ್ಗೆ ಮಾಹಿತಿ ನೀಡಿಲ್ಲ. ಭ್ರಷ್ಟಾಚಾರದ ಬಗ್ಗೆ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಆದರೆ, ದಾಖಲೆ ನೀಡಲಿಲ್ಲ. ಭ್ರಷ್ಟಾಚಾರದ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿದ್ದರು. ಆದರೆ, ದಾಖಲೆ ನೀಡಲಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ, ದಾಖಲೆ ನೀಡಲಿಲ್ಲ ಎಂದರು.
ಅನ್ನಭಾಗ್ಯ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರವಾಗಿತ್ತು: ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರವಾಗಿತ್ತು. ಯೋಜನೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಅಧಿಕಾರಿ ಅನುರಾಗ್ ತಿವಾರಿ ವರದಿಯಲ್ಲಿ ತಿಳಿಸಿದ್ದರು. ಆದರೆ, ಅವರು ಉತ್ತರ ಪ್ರದೇಶದ ತಮ್ಮ ಊರಲ್ಲಿ ಕೊಲೆಯಾದರು. ಡಿ. ಕೆ ರವಿ, ಎಂ ಕೆ ಗಣಪತಿ ವಿಚಾರದಲ್ಲೂ ತನಿಖೆಯಾಗಲಿಲ್ಲ. ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಮತ್ತು ಸ್ಕ್ಯಾನಿಂಗ್ ಸೌಲಭ್ಯ ಕೇಂದ್ರಗಳ ಸ್ಥಾಪನೆಗೆ ಕಾಂಗ್ರೆಸ್ ಸರ್ಕಾರ, ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್‍ಗೆ ನೀಡಿತ್ತು. ಈ ಗುತ್ತಿಗೆಗೆ ಅನೇಕ ಪ್ರಮುಖ ಸಂಸ್ಥೆಗಳು ಸ್ಪರ್ಧಿಸಿದ್ದರೂ, ತಮ್ಮ ಪುತ್ರನಿಗೆ ಲಾಭವಾಗಲೆಂದು ಗುತ್ತಿಗೆಯನ್ನು ಮ್ಯಾಟ್ರಿಕ್ಸ್ಗೆ ನೀಡಿದ್ದರು ಎಂದು ಹೇಳಿದರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, 65 ವರ್ಷಗಳ ಕಾಂಗ್ರೆಸ್ ಸಾಧನೆ, ಮೂರುವರೆ ವರ್ಷಗಳಲ್ಲಿ ಬಿಜೆಪಿ ಸಾಧನೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸುತ್ತಿರುವ ಕಾಂಗ್ರೆಸ್ ನಾಯಕರು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯವರನ್ನು ನಿಂದಿಸುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್, ವಿಶ್ವದಲ್ಲೇ ಅತಿ ಭ್ರಷ್ಟ ಸರ್ಕಾರವಾಗಿದೆ. ಬಿಜೆಪಿಯದ್ದು ಅಭಿವೃದ್ಧಿ ರಾಜಕಾರಣವಾಗಿದೆ. ಆದರೆ, ಕಾಂಗ್ರೆಸ್‍ನದ್ದು ಓಲೈಕೆಯ, ಸುಳ್ಳುಗಳ, ದಾರಿ ತಪ್ಪಿಸುವ ರಾಜಕೀಯವಾಗಿದೆ ಎಂದು ಹೇಳಿದರು.
28 ಪ್ರಕರಣಗಳಲ್ಲಿ ನಮಗೆ ಜಯ ಸಿಕ್ಕಿದೆ: ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್ ಆರ್ ರಮೇಶ್ ಮಾತನಾಡಿ, ಭ್ರಷ್ಟಾಚಾರ ಆರೋಪಗಳಿಗೆ ಪೂರಕವಾಗಿ ಕಾಂಗ್ರೆಸ್ ದಾಖಲೆಗಳನ್ನು ನೀಡುತ್ತಿಲ್ಲ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದ್ದ 122 ಹಗರಣಗಳಿಗೆ ಸಂಬಂಧಿಸಿ ಬಿಜೆಪಿ ದಾಖಲೆಗಳ ಸಹಿತ ಮಾಹಿತಿ ಒದಗಿಸಿದೆ. ಈ ಪೈಕಿ ವಿವಿಧ ಪ್ರಕರಣಗಳು ತನಿಖಾ ಹಂತದಲ್ಲಿದ್ದು, 28 ಪ್ರಕರಣಗಳಲ್ಲಿ ನಮಗೆ ಜಯ ಸಿಕ್ಕಿದೆ ಎಂದು ತಿಳಿಸಿದರು.
ಸರ್ಕಾರಿ ಭೂ ಕಬಳಿಕೆ, ಇಂದಿರಾ ಕ್ಯಾಂಟೀನ್‍ನಲ್ಲಿ ನಡೆದಿರುವ ಅವ್ಯವಹಾರ, ಕಸ ವಿಲೇವಾರಿಯಲ್ಲಿ ನಡೆದಿರುವ ಅಕ್ರಮಗಳು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನಡೆದಿರುವ ಅಕ್ರಮ, ಗಾಂಧಿನಗರ ಕ್ಷೇತ್ರದಲ್ಲಿ ನಡೆದಿರುವ ಹಗರಣಗಳು, ಏಡ್ಸ್ ನಿಯಂತ್ರಣಾ ಸೊಸೈಟಿಯಲ್ಲಿ ನಡೆದಿರುವ ಅಕ್ರಮಗಳು, ನಕಲಿ ದಾಖಲಿಸಿ ಭೂಕಬಳಿಕೆ ಮಾಡಿರುವುದು ಮುಂತಾದ ಹಗರಣಗಳು ಇದರಲ್ಲಿ ಸೇರಿವೆ ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಭದ್ರಕೋಟೆ ಶಾಂತಿನಗರ.. ಹ್ಯಾರಿಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ, ಜೆಡಿಎಸ್ ರಣತಂತ್ರ