ಬೆಂಗಳೂರು:ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಜನ ವಿರೋಧಿ ಬಿಜೆಪಿ ಎಂದು ಲೇವಡಿ ಮಾಡಿದೆ. ಸರಣಿ ಟ್ವೀಟ್ ಮೂಲಕ ತನ್ನ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್, ಚಿಕ್ಕಮಗಳೂರಿನ ಮೂಡಿಗೆರೆಗೆ ನೆರೆ ಪರಿಹಾರವಿಲ್ಲ ಎಂದು ಬಿಜೆಪಿ ಶಾಸಕ ತಮ್ಮದೆ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರೆ, ಅದೇ ಜಿಲ್ಲೆಯ ಸಿಟಿ ರವಿ ಚೆಂಡು ಹೂವಿನ ಗಿಡ ಸೇವಿಸಿ ಬಾಯಿಗೆ ಬಂದಂತೆ ಮಾತನಾಡುತ್ತಾ ತಿರುಗುತ್ತಿದ್ದಾರೆ. ತನ್ನ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡುವುದು ಅವರ ಆದ್ಯತೆ ಅಲ್ಲವೇ ಅಲ್ಲ ಎಂದಿದೆ.
ಕೊಳಕು ನಾಲಿಗೆ:
ಕೊಳಕು ನಾಲಿಗೆಯ ಸಿಟಿ ರವಿ ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದಾಗ ರಾಜ್ಯದಲ್ಲಿ ಕ್ಯಾಸಿನೋ ತೆರೆಯಲು ಮುಂದಾಗಿದ್ದರು. ಮಿಸ್ಟರ್ ಸಿಟಿ ರವಿ ಅವರೇ, ಆ ನಿಮ್ಮ ಮಹತ್ವಾಕಾಂಕ್ಷೆ ಯೋಜನೆಗೆ 'ದೀನದಯಾಳ್ ಕ್ಯಾಸಿನೋ ಯೋಜನೆ' ಎಂದು ನಾಮಕರಣ ಮಾಡ್ತಿದ್ರಾ!? ವಕ್ಯಾಸಿನೋ, ಜೂಜು, ಬಾರ್, ಹುಕ್ಕಾ, ಚೆಂಡು ಹೂ ಇವೆಲ್ಲ ಸಿಟಿ ರವಿಗೆ ಬಹು ಪ್ರಿಯವಾದವು ಎಂದಿದೆ.
ಸರ್ಕಾರ ಟೇಕಾಫ್ ಆಗಿಲ್ಲ:
ಕೊರೊನಾ 3ನೇ ಅಲೆಯ ಆತಂಕ ಕಾಡುತ್ತಿರುವಾಗ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಸರ್ಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ. ಸಚಿವರು ತಮ್ಮ ಕೆಲಸ ಶುರು ಮಾಡಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಆಂತರಿಕ ಕಿತ್ತಾಟಗಳ ಸಂಧಾನ ಸಭೆಗಳಲ್ಲಿಯೇ ತಮ್ಮ ಅಧಿಕಾರವಧಿಯನ್ನ ಕಳೆಯುತ್ತಿದ್ದಾರೆ. ಬಿಜೆಪಿ ಪಕ್ಷ ಕೊರೊನಾಗಿಂತಲೂ ಭೀಕರ ಸೋಂಕು ಎಂದಿದೆ.
ಇಂದಿರಾ ಕ್ಯಾಂಟೀನ್ ಮಾದರಿಯಾದರೂ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಕಳಪೆ ಗುಣಮಟ್ಟದ 'ದೀನ್ ದಯಾಳ್ ಉಪಾಧ್ಯಾಯ ರಸೊಯ್' ಎಂಬ ಕ್ಯಾಂಟೀನ್ ತೆರೆದಿದೆ. ಆ ಯೋಜನೆಯ ಹಣ ದೀನದಯಾಳ್ ಆಸ್ತಿ ಮಾರಿದ್ದೇ? ಅಥವಾ ಆತ ಮಾಜಿ ಪ್ರಧಾನಿಯೇ? ಸ್ವತಂತ್ರ ಹೊರಾಟಗಾರನೇ? ದೇಶಕ್ಕೆ ಒಂದು ಹನಿ ಕೊಡುಗೆಯನ್ನೂ ಕೊಡದ ಆತನ ಹೆಸರೇಕೆ ಸಿಟಿ ರವಿ ಹಾಗೂ ಬಿಜೆಪಿ ಪಕ್ಷದವರೇ ಎಂದು ಪ್ರಶ್ನಿಸಿದೆ.