ಕರ್ನಾಟಕ

karnataka

ETV Bharat / state

ದೇಶದ ಅಭಿವೃದ್ಧಿ ವಿಷಯದಲ್ಲಿ ಅರ್ಧ ಸತ್ಯ ಹೇಳಿದ ಕಾಂಗ್ರೆಸ್ ಪಕ್ಷದ ಮುಖಂಡರು: ಸಿ.ಟಿ. ರವಿ - ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಲು ಸಾಲು ಭ್ರಷ್ಟಾಚಾರ ನಡೆದಿದೆ ಎಂದ ರವಿ

ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್​​ರ ಹೇಳಿಕೆ ಅರ್ಧ ಸತ್ಯವನ್ನಷ್ಟೇ ಒಳಗೊಂಡಿದೆ. ಸ್ವಾತಂತ್ರ್ಯ ಬಂದ ಬಳಿಕ 67 ವರ್ಷಗಳಲ್ಲಿ 2014ರವರೆಗೆ 65 ವಿಮಾನ ನಿಲ್ದಾಣಗಳಿದ್ದವು. ಕಳೆದ 7 ವರ್ಷದಲ್ಲಿ ಹೊಸ 35 ಹೆಚ್ಚುವರಿ ವಿಮಾನ ನಿಲ್ದಾಣಗಳು ಸೇರಿವೆ. ದೇಶದಲ್ಲಿ 2014ವರೆಗೆ 46.76 ಲಕ್ಷ ಕಿ.ಮೀ ರಸ್ತೆ ಇತ್ತು. ಕೇವಲ 7 ವರ್ಷದಲ್ಲಿ 15.38 ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಸೇರ್ಪಡೆಯಾಗಿದೆ. ಹೀಗೆ ಅನೇಕ ರೀತಿಯ ಅಭಿವೃದ್ಧಿಯ ಕಾರ್ಯಗಳನ್ನು ನಾವು ಮಾಡಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

CT Ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

By

Published : Mar 31, 2022, 9:16 PM IST

ಬೆಂಗಳೂರು: ಕಾಂಗ್ರೆಸ್ ಪದಾಧಿಕಾರಿಗಳ ಲಿಸ್ಟ್ ರೈಲ್ವೆ ಎಂಜಿನ್ ಬೋಗಿಗಿಂತ ಉದ್ದ ಇದೆ. ದೇಶದಲ್ಲಿ ಆಗಿರುವ ಎಲ್ಲ ಅಭಿವೃದ್ಧಿ ಕಾರ್ಯಗಳೂ ಕಾಂಗ್ರೆಸ್ ಅವಧಿಯಲ್ಲೇ ಆಗಿವೆ. ವೈದ್ಯಕೀಯ ಕಾಲೇಜು, ರಸ್ತೆ, ಏರ್​ಪೋರ್ಟ್ ಮೊದಲಾದ ಅಭಿವೃದ್ಧಿ ಕಾರ್ಯ ಎಲ್ಲವೂ ಕಾಂಗ್ರೆಸ್ ಅವಧಿಯಲ್ಲೇ ಆಗಿದೆ ಎಂಬ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್​​ ಅವರ ಹೇಳಿಕೆ ಅರ್ಧ ಸತ್ಯವನ್ನಷ್ಟೇ ಒಳಗೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.

ಶೇ.50ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಸ್ಥಾಪನೆ: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದ ಬಳಿಕ 67 ವರ್ಷಗಳಲ್ಲಿ 2014ರವರೆಗೆ 65 ವಿಮಾನ ನಿಲ್ದಾಣಗಳಿದ್ದವು. ಕಳೆದ 7 ವರ್ಷದಲ್ಲಿ ಹೊಸ 35 ಹೆಚ್ಚುವರಿ ವಿಮಾನ ನಿಲ್ದಾಣಗಳು ಸೇರಿವೆ. ಸರಾಸರಿ ಲೆಕ್ಕ ಹಾಕಿದರೆ ಕೇವಲ 7 ವರ್ಷಗಳಲ್ಲಿ ಬಿಜೆಪಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಶೇ.50ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ವಿವರ ನೀಡಿದರು.

ದೇಶದಲ್ಲಿ 2014ವರೆಗೆ 46.76 ಲಕ್ಷ ಕಿಲೋ ಮೀಟರ್​ ರಸ್ತೆ ಇತ್ತು. ಕೇವಲ 7 ವರ್ಷದಲ್ಲಿ 15.38 ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಸೇರ್ಪಡೆಯಾಗಿದೆ. ಶೇಕಡಾ 33ರಷ್ಟು ಹೆಚ್ಚಳ ಇದಾಗಿದೆ. ಕೇವಲ 7 ವರ್ಷದಲ್ಲಿ ಆಗಿದೆ. ಹಿಂದೆ ದಿನಕ್ಕೆ 12 ಕಿ.ಮೀ ರಸ್ತೆ ನಿರ್ಮಾಣ ಆಗುತ್ತಿದ್ದರೆ, ಕಳೆದ 5 ವರ್ಷಗಳಿಂದ 40 ಕಿ.ಮೀ. ನಿರ್ಮಾಣ ಆಗುತ್ತಿದೆ. ಇದೊಂದು ಮೈಲಿಗಲ್ಲು ಎಂದು ತಿಳಿಸಿದರು.

2014ರ ವರೆಗೆ 7 ಏಮ್ಸ್ (ಆಲ್ ಇಂಡಿಯಾ ಮೆಡಿಕಲ್ ಸೈನ್ಸ್) ಇದ್ದರೆ, ಈಗ 7 ವರ್ಷದಲ್ಲಿ 22 ಹೆಚ್ಚುವರಿ ಸ್ಥಾಪನೆಯಾಗಿದೆ. 67 ವರ್ಷಗಳಲ್ಲಿ ವೈದ್ಯಕೀಯ ಸೀಟು 82 ಸಾವಿರ ಇತ್ತು. ಹೊಸ ಸೀಟು- 1.42 ಲಕ್ಷ ಕೊಟ್ಟಿದ್ದು, ಶೇ.80 ಹೆಚ್ಚುವರಿ ಆಗಿದೆ. ವೈದ್ಯಕೀಯ ಕಾಲೇಜು 387 ಇದ್ದವು. ಈಗ 596 ವೈದ್ಯಕೀಯ ಕಾಲೇಜುಗಳಾಗಿ ಹೆಚ್ಚಾಗಿದ್ದು, ಶೇ. 54 ರಷ್ಟು ಹೆಚ್ಚಳ ಆಗಿದೆ ಎಂದು ವಿವರಿಸಿದರು.

ಜಲಜೀವನ್ ಮಿಷನ್ ಅನುಷ್ಠಾನ: ವೇಗಗತಿಯಲ್ಲಿ ಜಲಜೀವನ್ ಮಿಷನ್ ಅನುಷ್ಠಾನ ನಡೆದಿದೆ. ಶೇ.90ರಷ್ಟು ಬಡವರ ಮನೆಯಲ್ಲಿ ಶೌಚಾಲಯ ನಿರ್ಮಾಣ ಆಗಿದೆ. 42 ಕೋಟಿ ಬಡವರಿಗೆ ಜನ್‍ಧನ್ ಖಾತೆ ತೆರೆಸಲು ಅವಕಾಶವಾಗಿದೆ. ಇದೆಲ್ಲಾ ಬದಲಾವಣೆಯ ಸ್ಯಾಂಪಲ್ ಅಷ್ಟೇ. ಎಂ.ಬಿ. ಪಾಟೀಲ್​​ ಅರ್ಧ ಸತ್ಯ ಹೇಳಿದ್ದು, ಹೇಳದೆ ಇರುವ ಅಂಶಗಳೂ ಇವೆ ಎಂದು ಹೇಳಿದರು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಲು ಸಾಲು ಭ್ರಷ್ಟಾಚಾರ ನಡೆದಿದ್ದು, ಆ ಕೀರ್ತಿ ಅದೇ ಪಕ್ಷಕ್ಕೆ ಸಲ್ಲುತ್ತದೆ. ಎ ಯಿಂದ ಜೆಡ್‍ವರೆಗೆ ಭ್ರಷ್ಟಾಚಾರ ನಡೆದಿದೆ. ಅವರು ಜಾಣಮರೆವು ಪ್ರದರ್ಶಿಸಿದ್ದಾರೆ. ಕುಟುಂಬ ರಾಜಕಾರಣ ಬೆಳೆಸಿ ಪದಾಧಿಕಾರಿಗಳನ್ನು ತುಳಿದ ಕೀರ್ತಿಯೂ ಅವರಿಗೇ ಸೇರುತ್ತದೆ. ಜಾತ್ಯತೀತತೆ ಪರಿಭಾಷೆ ಓಲೈಕೆಯನ್ನು ಸೇರಿಸಿದ್ದೂ ಕಾಂಗ್ರೆಸ್ ಪಕ್ಷವೇ ಆಗಿದೆ. ತುಷ್ಟೀಕರಣ ರಾಜಕೀಯ ನೀತಿ ಸ್ಥಾಪನೆ ಮತ್ತು ವಿಸ್ತರಣೆಯೂ ಅವರ ಕಾಲಘಟ್ಟದಲ್ಲೇ ಆಗಿದೆ ಎಂದು ತಿಳಿಸಿದರು. ಸ್ವಜನಪಕ್ಷಪಾತ, ಭ್ರಷ್ಟಾಚಾರ, ಜಾತೀಯತೆ, ತುಷ್ಟೀಕರಣ ರಾಜಕೀಯ, ಭಯೋತ್ಪಾದಕರ ಜೊತೆ ರಾಜಕೀಯ ಮಾಡಬಹುದು ಎಂಬುದನ್ನೂ ಕಾಂಗ್ರೆಸ್ ತೋರಿಸಿಕೊಟ್ಟಿದೆ. ಭಯೋತ್ಪಾದಕರು ಪ್ರಧಾನಿಯವರ ಜೊತೆ ಕೈಕುಲುಕುವ, ಫೋಟೋ ಶೂಟ್ ಮಾಡುವ ಸ್ಥಿತಿ ಬಂದಿತ್ತು ಎಂದು ತಿಳಿಸಿದರು.

ಇದನ್ನೂ ಓದಿ:ಮತೀಯ ಉದ್ದೇಶಕ್ಕೆ ಹಲಾಲ್ ಬಳಕೆ: ಸಿ.ಟಿ. ರವಿ ಆರೋಪ

ಪ್ರಿಯಾಂಕ್ ಖರ್ಗೆಗೆ ತಿರುಗೇಟು: ತಾಕತ್ತಿನ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ಠೇವಣಿ ಕಳೆದುಕೊಂಡ ಸಂಖ್ಯೆಯ ಮೂಲಕ ಕಾಂಗ್ರೆಸ್ ತಾಕತ್ತು ಉತ್ತರ ಪ್ರದೇಶದಲ್ಲಿ ಸ್ಪಷ್ಟಗೊಂಡಿದೆ. ರಾಷ್ಟ್ರದ ಹಿತ ಬಂದಾಗ ನಮ್ಮ ದೇಶ ಯಾರಿಗೂ ಬಗ್ಗಿಲ್ಲ. ಭಾರತದಲ್ಲಿ ಹಿಂದೆ ದುರ್ಬಲ ರಾಜಕೀಯ ವ್ಯವಸ್ಥೆ ಇತ್ತು. ದೇಶದ ಹಿತಾಸಕ್ತಿಯನ್ನು ಆಧರಿಸಿ ನಾವು ವ್ಯವಹಾರ ಮಾಡುತ್ತೇವೆ, ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ತೈಲ ಪುಗ್ಸಟ್ಟೆ ಖರೀದಿಸಿಲ್ಲ: ಹಲಾಲ್ ಕಟ್ ವಿವಾದದಲ್ಲಿ ಮುಸ್ಲಿಂ ರಾಷ್ಟ್ರಗಳಿಂದ ತೈಲ ಬಹಿಷ್ಕಾರ ಮಾಡಿ ಎನ್ನುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಸಿ.ಟಿ ರವಿ, ಪೆಟ್ರೋಲ್ ಉತ್ಪನ್ನವನ್ನು ಅವರು ಉಚಿತವಾಗಿ ನೀಡಿಲ್ಲ. ದುಡ್ಡು ಕೊಟ್ಟೇ ಪೆಟ್ರೋಲಿಯಂ ಉತ್ಪನ್ನ ಖರೀದಿಸಿದ್ದೇವೆ. ಪುಗ್ಸಟ್ಟೆ ಕೊಟ್ಟಿದ್ದರೆ ಖರ್ಗೆಯವರಿಗೆ ದೀರ್ಘ ದಂಡ ನಮಸ್ಕಾರ ಮಾಡುತ್ತೇವೆ. ಎಲ್ಲಾ ರಾಷ್ಟ್ರಗಳು ಆಯಾ ದೇಶಗಳ ಹಿತಾಸಕ್ತಿ ನೋಡಿಕೊಂಡೇ ವ್ಯವಹಾರ ಮಾಡಲಿವೆ. ಒಂದು ವೇಳೆ ನಾವು ತೈಲ ಖರೀದಿ ಮಾಡದೇ ಇದ್ದರೆ ಅವರಿಗೆ ದೊಡ್ಡ ಮಾರುಕಟ್ಟೆ ನಷ್ಟವಾಗಲಿದೆ. ಅವರೇನು ತೈಲು ಕುಡಿಯುತ್ತಾರಾ? ಮಾರಾಟ ಮಾಡಲೇಬೇಕಲ್ಲವೇ? ಹಿಂದೆ ಅಮೆರಿಕ ಕೂಡ ಪೋಖ್ರಾನ್ ಅಣು ಪರೀಕ್ಷೆ ನಂತರ ಹೇರಿದ್ದ ಆರ್ಥಿಕ ನಿರ್ಬಂಧವನ್ನು ಸದ್ದಿಲ್ಲದೇ ತೆರವು ಮಾಡಿತ್ತು. ಇದಕ್ಕೆ ಕಾರಣ ಭಾರತ ದೊಡ್ಡ ಮಾರುಕಟ್ಟೆ ಎನ್ನುವುದಾಗಿದೆ ಎಂದರು.

ಕಾರ್ಯಕಾರಿಣಿ ಸಭೆ: ಏಪ್ರಿಲ್ 16, 17ರಂದು ವಿಜಯನಗರ ಜಿಲ್ಲೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ನಡೆಯಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. 16ರಂದು ಸಂಜೆ ಬಂದು 17ರಂದು ಪೂರ್ಣ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ಕಾರ್ಯಕಾರಿಣಿಯಲ್ಲಿ ಒಂದು ವರ್ಷದ ಕಾರ್ಯ ಚಟುವಟಿಕೆ, ಒಂದು ವರ್ಷದೊಳಗೆ ನಡೆಯುವ ಚುನಾವಣೆ ರೋಡ್‍ಮ್ಯಾಪ್ ಕುರಿತು ಚರ್ಚೆ ನಡೆಯಲಿದೆ. ಸಂಘಟನಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಪಕ್ಷವನ್ನು ಬಲಿಷ್ಠಗೊಳಿಸುವ ಸಂಬಂಧದಲ್ಲಿ ಮಾರ್ಗದರ್ಶನ ಸಿಗಲಿದೆ ಎಂದು ವಿವರಿಸಿದರು. ನಡ್ಡಾ ಅವರ ನೇತೃತ್ವದಲ್ಲಿ ಪಕ್ಷವು ಚುನಾವಣೆ ಗೆಲ್ಲುವುದು ಮಾತ್ರವಲ್ಲ; ಪಕ್ಷದ ಕಾರ್ಯಕರ್ತರನ್ನು ಸಮಾಜದ ನಡುವೆ ಕೆಲಸ ಮಾಡುವಂತೆ ಅವರು ಪರಿವರ್ತಿಸಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details