ಬೆಂಗಳೂರು:ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಅಧಿಕಾರವಹಿಸಿಕೊಂಡು ಸಚಿವ ಸಂಪುಟ ರಚನೆ ಕಸರತ್ತಿನಲ್ಲಿ ತೊಡಗಿದ್ದಾರೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಮಾತ್ರ ನಿರಂತರ ರಾಜ್ಯ ಪ್ರವಾಸ, ನೆರೆ ವೀಕ್ಷಣೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಎರಡು ವರ್ಷ ಹಿಂದೆ ಮೈತ್ರಿ ಸರ್ಕಾರವನ್ನು ಬೀಳಿಸಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು. ಬಳಿಕ ಎರಡು ವರ್ಷ ಪೂರೈಸಿ ಬಿಎಸ್ವೈ ಅಧಿಕಾರ ಪೂರ್ಣಗೊಳಿಸಿ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ಬಂದಿದ್ದಾರೆ. ಒಟ್ಟು ಮೂರು ಮಳೆಗಾಲದ ನೆರೆ ವೀಕ್ಷಣೆ ಮಾಡಿದ್ದಾರೆ. ಸೂಕ್ತ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುತ್ತ ಬಂದಿದ್ದ ಕಾಂಗ್ರೆಸ್ ನಾಯಕರು ಈ ಸಾರಿ ವಸ್ತು ಸ್ಥಿತಿ ಅರಿತು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಪೂರಕ ಮಾಹಿತಿ ಕಲೆ ಹಾಕಲು ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಸುತ್ತಿ, ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಇಲ್ಲಿ ಬಹುಮುಖ್ಯ ಅಂಶವೆಂದರೆ ರಾಜ್ಯ ಸರ್ಕಾರ ಮಾಡಲಾಗದ ನೋಡದ ಮಾಹಿತಿಯನ್ನು ಕಲೆಹಾಕುವುದು. ಅಲ್ಲದೆ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಸೂಕ್ತ ವೇದಿಕೆಯಲ್ಲಿ ನಿಂತು ಸವಾಲು ಹಾಕುವುದಾಗಿದೆ.
ಚುನಾವಣೆ ದೃಷ್ಟಿ:
ಮುಂದಿನ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕೆ ರಾಷ್ಟ್ರೀಯ ನಾಯಕರು ಹೆಗಲು ಕೊಟ್ಟಿದ್ದಾರೆ. ಇದರ ಜೊತೆಗೆ ಪಕ್ಷದ ಶಾಸಕರು, ಮುಖಂಡರು, ನಾಯಕರಿಗೆ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪಕ್ಷವನ್ನು ಕಟ್ಟುವ ಕಾರ್ಯ ಕೈಗೊಳ್ಳಬೇಕು. ನೆರೆ, ಬರ ಸಮಸ್ಯೆಯಿಂದ ಜನ ಬಳಲುತ್ತಿದ್ದರೆ ಅದನ್ನು ತಾಲೂಕು, ಜಿಲ್ಲೆ, ರಾಜ್ಯ ನಾಯಕರ ಗಮನಕ್ಕೆ ತರಬೇಕು. ನಾವು ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸೋಣ, ಸರ್ಕಾರದ ಗಮನಕ್ಕೆ ತಂದು ಒತ್ತಡ ಹೇರೋಣ. ಇದರಿಂದ ಜನರ ದೃಷ್ಟಿಯಲ್ಲಿ ನಮಗೆ ಹೆಚ್ಚಿನ ಗೌರವ ಸಿಗಲಿದೆ ಎಂದು ಕರೆ ಕೊಟ್ಟಿದ್ದಾರೆ.