ಕರ್ನಾಟಕ

karnataka

By

Published : Jun 1, 2019, 6:12 PM IST

Updated : Jun 1, 2019, 6:32 PM IST

ETV Bharat / state

ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ದರ್ಬಾರ್‌.. ಕೈ ನಾಯಕರಿಂದ ಮತ್ತೆ ಇವಿಎಂ ಟ್ಯಾಂಪ್‌ರಿಂಗ್‌ ವಾರ್..

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಇವಿಎಂ ವಿಚಾರವಾಗಿ ಮತ್ತೆ ಟ್ವಿಟರ್ ಮೂಲಕ ಪ್ರಸ್ತಾಪ ಮಾಡಿದ್ದಾರೆ. ಇವಿಎಂ ಯಂತ್ರ ತಿರುಚುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ತನಿಖೆ ಆಗಲಿ ಎಂದಿದ್ದಾರೆ.

Congress party

ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆಯಿಂದ ಕಂಗೆಟ್ಟಿದ್ದ ನಾಯಕರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಉತ್ಸಾಹ ಹಾಗೂ ಶಕ್ತಿಯನ್ನು ಇಮ್ಮಡಿಗೊಳಿಸಿದ್ದು, ಈ ಸಾಧನೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಇವಿಎಂ ಟ್ಯಾಂಪರಿಂಗ್ ವಿಚಾರವಾಗಿ ಆರೋಪ ಮಾಡಲು ಪುಷ್ಠಿ ನೀಡಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಕಾಂಗ್ರೆಸ್​ಗೆ ಕೇವಲ ಒಂದು ಸ್ಥಾನ ಸಿಕ್ಕಿತ್ತು. ಮೈತ್ರಿ ಪಕ್ಷ ಜೆಡಿಎಸ್ ಕೂಡ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮೇಲುಗೈ ಸಾಧಿಸಿದೆ. ಲೋಕಸಭೆ ಚುನಾವಣೆಯಲ್ಲಿ ಶೇ.51ರಷ್ಟು ಮತ ಪಡೆದಿದ್ದ ಬಿಜೆಪಿಗೆ ಈ ಸಾರಿ ಶೇ. 30ರಷ್ಟು ಮತ ಬಂದಿದೆ. ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಶೇ.31.8ರಷ್ಟು ಮತ ಪಡೆದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.41.72ರಷ್ಟು ಮತ ಗಳಿಕೆ ಕಾಂಗ್ರೆಸ್‌ಗಾಗಿದೆ.

ಬಿಜೆಪಿ ಅಲೆ ಮೆಟ್ಟಿನಿಂತ ಕಾಂಗ್ರೆಸ್ ಅಭೂತಪೂರ್ವ ಮುನ್ನಡೆ ಸಾಧಿಸಿದೆ. ಈ ಸಾಧನೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಇವಿಎಂ ಟ್ಯಾಂಪರಿಂಗ್ ವಿಚಾರವಾಗಿ ಆರೋಪ ಮಾಡಲು ಪುಷ್ಠಿ ನೀಡಿದೆ. ಈ ಹಿಂದೆ ನಡೆದ ಹಲವು ಚುನಾವಣೆಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತ ಬಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಚುನಾವಣಾ ಆಯೋಗದ ಅಡಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಗೆಲುವು ಹೊಸದೊಂದು ಬಲ ತಂದುಕೊಟ್ಟಿದ್ದು, ಇವಿಎಂ ತಿರುಚುವ ವಿಚಾರವಾಗಿ ಮತ್ತಷ್ಟು ಆರೋಪ ಮಾಡಲು ಪುಷ್ಠಿ ನೀಡಿದೆ. ಜೊತೆಗೆ ತಮ್ಮ ಈ ಹಿಂದಿನ ಆರೋಪಗಳಲ್ಲಿ ಸತ್ಯವಿದೆ ಎಂದು ವಾದಿಸಲು ಹೊಸ ಶಕ್ತಿ ಲಭಿಸಿದಂತಾಗಿದೆ.

ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಕಾಂಗ್ರೆಸ್ ನಾಯಕರು ಮತ್ತೆ ಇವಿಎಂ ವಿಚಾರ ಕೈಗೆತ್ತಿಕೊಂಡಿದ್ದು, ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ್ದಾರೆ. ಅಲ್ಲದೇ ತಾವು ಈ ಹಿಂದೆ ನೀಡಿದ್ದ ದೂರುಗಳಿಗೆ ಸೂಕ್ತ ದಾಖಲೆ ಸಮೇತ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಉತ್ತರ ನಿರೀಕ್ಷಿಸಲಾಗುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಇವಿಎಂ ವಿಚಾರವಾಗಿ ಮತ್ತೆ ಟ್ವಿಟರ್ ಮೂಲಕ ಪ್ರಸ್ತಾಪ ಮಾಡಿದ್ದಾರೆ. ಇವಿಎಂ ಯಂತ್ರ ತಿರುಚುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ತನಿಖೆ ಆಗಲಿ ಎಂದಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಜನ ಬಿಜೆಪಿಗೆ ಶೇ.51.38ರಷ್ಟು ಮತ ನೀಡಿದ್ದು, ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಸೇರಿ ಶೇ.41ರಷ್ಟು ಮತ ಗಳಿಸಿದ್ದವು. ಇದರಲ್ಲಿ ಕಾಂಗ್ರೆಸ್ ಪಾಲು ಶೇ. 31.88 ರಷ್ಟಾಗಿದ್ದರೆ, ಜೆಡಿಎಸ್ ಪಾಲು ಶೇ. 9.67ರಷ್ಟಾಗಿತ್ತು. 1.8 ಕೋಟಿ ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. 1.1 ಕೋಟಿ ಮಂದಿ ಕಾಂಗ್ರೆಸ್ ಪರ ಮತದಾನ ಮಾಡಿದ್ದರು. ಜೆಡಿಎಸ್​ಗೆ 34 ಲಕ್ಷ ಮಂದಿಯ ಬೆಂಬಲ ಸಿಕ್ಕಿತ್ತು. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಕಷ್ಟು ಉಲ್ಟಾ ಆಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದ ಕೈ ನಾಯಕರಿಂದ ಮತ್ತೆ ಇವಿಎಂ ಮೇಲೆ ಸಂಶಯದ ನೋಟ!

ಸುಮಾರು 1221 ಸ್ಥಾನಗಳಿಗೆ ನಡೆದ ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯತ್ ಸ್ಥಾನಗಳ ಪೈಕಿ ಕಾಂಗ್ರೆಸ್ ಶೇ.41.72ರಷ್ಟು ಅಂದರೆ 509 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇನ್ನು ಬಿಜೆಪಿ ಶೇ.30ರಷ್ಟು ಸ್ಥಾನ ಅಂದರೆ 366 ಸ್ಥಾನಗಳಲ್ಲಿ ಗೆದ್ದಿದೆ. ಜೆಡಿಎಸ್ ಶೇ. 14ರಷ್ಟು ಅಂದರೆ 174 ಕ್ಷೇತ್ರ ಗೆದ್ದಿದೆ. ಪಕ್ಷೇತರರು ಲೋಕಸಭೆ ಚುನಾವಣೆಯಲ್ಲಿ ಶೇ.4.5 ರಷ್ಟು ಮತ ಗಳಿಸಿದ್ದರು. ಆದರೆ, ಇಲ್ಲಿ ಶೇ. 13.11 ರಷ್ಟು ಮತ ಗಳಿಸಿದ್ದು, ಲೋಕಸಭೆಯಲ್ಲಿ 1 ಸ್ಥಾನ ಗೆದ್ದಿದ್ದಾರೆ. ಇಲ್ಲಿ 160 ಸ್ಥಾನ ಗೆದ್ದಿದ್ದಾರೆ. ಸಿಪಿಎಂ ಹಾಗೂ ಬಿಎಸ್ಪಿ ತಲಾ 3 ಮತ್ತು 2 ಸ್ಥಾನ ಗೆದ್ದು ಖಾತೆ ತೆರೆದಿವೆ. ಆದರೆ, ಇಲ್ಲಿ ಸ್ಪಷ್ಟವಾಗಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಜೊತೆಗೆ ಸ್ಥಳೀಯ ಸಂಸ್ಥೆ ಚುನಾವಣೆ ಮಟ್ಟದಲ್ಲಿ ಬಿಜೆಪಿಯನ್ನು ಜನ ಬೆಂಬಲಿಸುವುದಿಲ್ಲ. 125 ವರ್ಷ ಹಳೆಯ ಪಕ್ಷ ತಳಮಟ್ಟದಲ್ಲಿ ಭದ್ರವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿದ್ದ ಕಾಂಗ್ರೆಸ್ ನಾಯಕರಿಗೆ ಈ ಗೆಲುವಿನ ಅಲೆ ಇನ್ನಷ್ಟು ಉತ್ಸಾಹ ತುಂಬಲಿದೆ. ಮೈತ್ರಿ ವಿರೋಧಿ ಗೆಲುವಾ? ಮೋದಿ ಅಲೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ವಿರೋಧಸಿದ ಪರಿಣಾಮ ರಾಜ್ಯದಲ್ಲಿ ಮೇ 23ಕ್ಕೆ ಪ್ರಕಟವಾದ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನಡೆ ಆಗಿತ್ತು. ಇದೀಗ ಅವೆರಡರ ಪ್ರಭಾವ ಇಲ್ಲದ ಕಾರಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಎನ್ನಲಾಗುತ್ತಿದೆ. ಇದಲ್ಲದೇ ಸ್ಥಳೀಯವಾಗಿ ಅಭ್ಯರ್ಥಿಗಳು ಹೊಂದಿದ್ದ ಪ್ರಭಾವ ಕೂಡ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.

Last Updated : Jun 1, 2019, 6:32 PM IST

For All Latest Updates

TAGGED:

ABOUT THE AUTHOR

...view details