ಬೆಂಗಳೂರು: "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿರುವುದರಿಂದ ರೌಡಿಗಳನ್ನು ಮುಂದಿಟ್ಟು ಬೆದರಿಸಿ ಗೆಲುವಿನ ತಂತ್ರಗಾರಿಕೆ ರೂಪಿಸಲು ಬಿಜೆಪಿ ಯತ್ನಿಸುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ. "ಬಿಜೆಪಿಗೆ ರೌಡಿಶೀಟರ್ಗಳನ್ನು ಕಂಡರೆ ಅದೇನು ಮಮಕಾರ, ವಾತ್ಸಲ್ಯ, ಅದೇನು ಪ್ರೀತಿ. ಬಿಜೆಪಿ ರೌಡಿ ಮೋರ್ಚಾಗೆ ಸೇರ್ಪಡೆಗೊಳಿಸಲು ರೌಡಿಶೀಟ್ ತೆಗೆದು ಅನುವು ಮಾಡಿಕೊಡುತ್ತಿರುವುದೇ ಆರಗ ಜ್ಞಾನೇಂದ್ರ" ಎಂದು ಲೇವಡಿ ಮಾಡಿದೆ.
"ಸೋಲುವ ಭಯದಲ್ಲಿರುವ ರಾಜ್ಯ ಬಿಜೆಪಿ ರೌಡಿಗಳನ್ನು ಮುಂದಿಟ್ಟುಕೊಂಡು ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ಎದುರಿಸುವ ತಂತ್ರ ಹೂಡಿರುವಂತಿದೆ. ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರಿಗೆ ರೌಡಿಶೀಟ್ ಕೊಡುಗೆ, ಅಸಲಿ ರೌಡಿಗಳಿಗೆ ರೌಡಿಶೀಟ್ ತೆರವು ಮಾಡುವ ಉಡುಗೊರೆ ನೀಡಲಾಗಿದೆ. ರಾಜ್ಯ ಬಿಜೆಪಿ ದೃಷ್ಟಿಯಲ್ಲಿ ವಿದ್ಯಾರ್ಥಿಗಳು, ಹೋರಾಟಗಾರರು ರೌಡಿಗಳಂತೆ ಕಾಣುತ್ತಾರೆ. ಹಾಗಾದರೆ ರೌಡಿಗಳು ಮಾತ್ರ ಸಭ್ಯಸ್ಥರಂತೆ ಕಾಣುತ್ತಾರೆಯೇ? ಆರಗ ಜ್ಞಾನೇಂದ್ರ ಅವರು ಬಿಜೆಪಿ ರೌಡಿ ಮೋರ್ಚಾಗೆ ಸದಸ್ಯರನ್ನು ತಯಾರು ಮಾಡುತ್ತಿರುವಂತಿದೆ" ಎಂದಿದೆ.
"ಬಿಜೆಪಿ ಸರ್ಕಾರ ಮಹಿಳೆಯರು ತಲೆಗೆ ಮುಡಿಯುವ ಹೂವನ್ನು ಕಿವಿಯ ಮೇಲೆ ಮುಡಿಸುತ್ತಿದೆ. ಕಳೆದ ಬಜೆಟ್ನಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಭರವಸೆ ನೀಡಿದ್ದು ಏನಾಯ್ತು ಬಸವರಾಜ ಬೊಮ್ಮಾಯಿ ಅವರೇ? ನಿಮ್ಮ ಬೋಗಸ್ ಭರವಸೆ ನಂಬಲು ಜನರನ್ನು ಮೂರ್ಖರೆಂದು ತಿಳಿದಿರುವಿರಾ? ಉಚಿತ ಬಸ್ ಪಾಸ್ ಎಂಬುದು ಕಿವಿ ಮೇಲೆ ಹೂವು" ಎಂದು ಕಿಚಾಯಿಸಿದೆ.
ಇದನ್ನೂ ಓದಿ:ಕೆಲ ರಾಜಕಾರಣಿಗಳಿಗೆ ಬ್ರಾಹ್ಮಣ ಸಮುದಾಯದ ಕುರಿತು ದೃಷ್ಟಿದೋಷವಿದೆ, ತಪಾಸಣೆ ಅಗತ್ಯ: ಎಸ್ ಸುರೇಶ್ ಕುಮಾರ್