ಬೆಂಗಳೂರು:ಮುಂಬರುವ ಉಪಚುನಾವಣೆಯಲ್ಲಿ ಶತಾಯಗತಾಯ ಹೋರಾಡಿ ಕ್ಷೇತ್ರ ಗೆಲ್ಲಲೇಬೇಕೆಂದು ಪಣತೊಟ್ಟು ಪ್ರಯತ್ನ ಆರಂಭಿಸಿರುವ ಕಾಂಗ್ರೆಸ್, ತಾನು ಕಳೆದುಕೊಂಡಿರುವ 14 ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಮರಳಿ ಪಡೆಯಲು ಸ್ಟ್ರ್ಯಾಟೆಜಿ ರೂಪಿಸುತ್ತಿದೆ.
17 ಕ್ಷೇತ್ರಗಳಲ್ಲಿ ಅನರ್ಹರಿಗೆ ಪಾಠ ಕಲಿಸಲು ನಿರ್ಧಾರ ಕೈಗೊಂಡಿರುವ ಕೈ ನಾಯಕರು, ಬಿಜೆಪಿ ತಂತ್ರಗಾರಿಕೆಯನ್ನೇ ನಕಲು ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಮತಬ್ಯಾಂಕ್ಗೆ ಕನ್ನ ಹಾಕುವ ಮೂಲಕ 5 ಲಕ್ಷ ಅಲ್ಪಸಂಖ್ಯಾತರ ಸದಸ್ಯತ್ವಕ್ಕೆ ಮುಂದಾಗಿರುವ ಬಿಜೆಪಿ ಮಾದರಿಯಲ್ಲೇ ತಾನೂ ವೋಟ್ ಬ್ಯಾಂಕ್ ಸಂಗ್ರಹಕ್ಕೆ ಮುಂದಾಗಿದೆ.
ಕೇಡರ್ ಆಧಾರಿತವಾಗಿ ಪಕ್ಷ ಬಲವರ್ಧನೆಗೆ ಮುಂದಾದ ಕಾಂಗ್ರೆಸ್ ಅದಕ್ಕೆ ತಕ್ಕಂತೆ ತಂತ್ರಗಾರಿಕೆ ರೂಪಿಸುವ ಹೊಣೆಯನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ನೀಡಲಿದೆ ಎಂಬ ಮಾಹಿತಿ ಸಿಕ್ಕಿದೆ. ಹೈಫೈ ಕಾರ್ಯಕರ್ತರನ್ನು ಪಕ್ಷದಿಂದಲೇ ಕೈಬಿಡುವುದು ಹಾಗೂ ಹೆಚ್ಚುಹೆಚ್ಚು ಹೊಸ ಕಾರ್ಯಕರ್ತರನ್ನು ಸೆಳೆಯುವ ಕಾರ್ಯಕ್ಕೆ ಮುಂದಾಗಲು ತೀರ್ಮಾನಿಸಲಾಗಿದೆ.
ಹಳ್ಳಿಗಳಲ್ಲಿ ಹೆಚ್ಚೆಚ್ಚು ಕಾರ್ಯಕರ್ತರ ನೋಂದಣಿಗೆ ನಿರ್ಧರಿಸಲಾಗಿದ್ದು, ಪ್ರತಿಹಳ್ಳಿಯಲ್ಲಿ 10 ಕ್ಕಿಂತ ಹೆಚ್ಚು ಸಂಘಟಕರ ನಿಯೋಜನೆಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಪ್ರತಿ ಹಳ್ಳಿಯ ಅರ್ಧಕ್ಕಿಂತ ಹೆಚ್ಚು ಮತದಾರರನ್ನು ಸೆಳೆಯುವಂತೆ ಯೋಜನೆ ರೂಪಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಲು ಕೈ ಪಕ್ಷ ಇಷ್ಟೊಂದು ಸಿದ್ಧತೆ ನಡೆಸಿದ್ದು, ತನ್ನ ಶಾಸಕರು ಪಕ್ಷಕ್ಕೆ ಕೈಕೊಟ್ಟ ಮೇಲೆ ಎದುರಾದ ಆತಂಕದಿಂದ ದೂರಾಗಲು ಎಚ್ಚೆತ್ತುಕೊಂಡಿದೆ ಎನ್ನಲಾಗುತ್ತಿದೆ.
ಮತ ಹಾಕುವವರೆಗೆ ಮತದಾರನ ಸಂಪರ್ಕದಲ್ಲಿ ಇರುವಂತೆ ಪಕ್ಷದ ಕಾರ್ಯಕರ್ತ ಪಡೆಗೆ ಸೂಚಿಸಲಾಗಿದ್ದು, ಈ ಮೂಲಕ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲೋಕೆ ತಂತ್ರ ಹೆಣೆದಿದೆ. ಇದರಲ್ಲಿ ಎಷ್ಟರ ಮಟ್ಟಿದೆ ಫಲ ಸಿಗುತ್ತೆ, ಇದಕ್ಕೆ ಬಿಜೆಪಿ ಯಾವ ಪ್ರತಿತಂತ್ರ ನಡೆಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.