ಬೆಳಗಾವಿ/ಬೆಂಗಳೂರು:ಮಾರ್ಚ್ 9 ರಂದು ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಭ್ರಷ್ಟಾಚಾರದ ಕಿಂಗ್ ಆಗಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ಕೈಗೊಂಡಿದೆ. ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರದ ದುರ್ವಾಸನೆ ವಾಕರಿಕೆ ತರಿಸಿದೆ. 40 ಪರ್ಸೆಂಟ್ ಸರ್ಕಾರ ಎಲ್ಲ ವರ್ಗದ ಜನರ ಬದುಕು ನಾಶ ಮಾಡಿದೆ. ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ, ಭ್ರಷ್ಟಾಚಾರಕ್ಕೋಸ್ಕರದ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರದ ಸಾಧನೆಗಳೆಂದರೆ,ಪ್ರತಿಯೊಂದು ಗುತ್ತಿಗೆಯಲ್ಲೂ 40 ಪರ್ಸೆಂಟ್ ಕಮಿಷನ್, ಶಾಲಾ ಅನುದಾನದಲ್ಲಿ 40 ಪರ್ಸೆಂಟ್ ಕಮಿಷನ್, ಧಾರ್ಮಿಕ ಮಠಗಳ ಅನುದಾನದಲ್ಲಿ 30 ಪರ್ಸೆಂಟ್ ಕಮಿಷನ್, ಮೈಸೂರು ಸ್ಯಾಂಡಲ್ ಸೋಪ್ ಅಕ್ರಮದಲ್ಲಿ ಲಂಚ, ಸರ್ಕಾರಿ ಹುದ್ದೆಗಳ ವರ್ಗಾವಣೆ ಮತ್ತು ಪೋಸ್ಟಿಂಗ್ಗೆ ಲಂಚ. ನೇಮಕಾತಿ ಅಕ್ರಮ, ಪಿಎಸ್ಐ, ಸಹಾಯಕ ಪ್ರಾಧ್ಯಾಪಕ, ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಜಿಲ್ಲಾ ಸಹಕಾರಿ ಬ್ಯಾಂಕ್, ಪೌರಕಾರ್ಮಿಕ ಕೆಲಸ, ಕೆಎಂಎಫ್ ಹುದ್ದೆ, ಸಹಾಯಕ ರಿಜಿಸ್ಟ್ರಾರ್ ಹುದ್ದೆ ನೇಮಕಾತಿ ಅಕ್ರಮಗಳು. ಬಿಜೆಪಿ ಹಾಗೂ ಬೊಮ್ಮಾಯಿ ಅವರ ಭ್ರಷ್ಟಾಚಾರಕ್ಕೆ ಇತ್ತೀಚಿನ ಕೆಎಸ್ಡಿಎಲ್ ಅಕ್ರಮ ಸಾಕ್ಷಿಯಾಗಿದೆ ಎಂದಿದ್ದಾರೆ.
ಬೆಳಗ್ಗೆ 9 ರಿಂದ 11 ರವರೆಗೆ ಸಾಂಕೇತಿಕ ಬಂದ್: ಬಿಜೆಪಿ ಸರ್ಕಾರದ ಈ ಲೂಟಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಮಾರ್ಚ್ 9 ರಂದು ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲು ಬೆಳಗ್ಗೆ 9 ಗಂಟೆಯಿಂದ ಬೆಳಗ್ಗೆ 11 ಗಂಟೆವರೆಗೂ ಸಾಂಕೇತಿಕ ಬಂದ್ ಮಾಡಲಾಗುವುದು. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ, ಸಾರಿಗೆ ಹಾಗೂ ಇತರ ಅಗತ್ಯ ಸೇವೆಗಳನ್ನು ಬಂದ್ ವ್ಯಾಪ್ತಿಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ.