ಬೆಂಗಳೂರು: ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದರೂ ಜೆಡಿಎಸ್ ತಟಸ್ಥ ನಿಲುವಿಗೆ ಬಂದಿರುವ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಈ ಪರೀಕ್ಷೆಯಲ್ಲಿ ಪಾರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ದಿಢೀರ್ ಬೆಳವಣಿಗೆಯಲ್ಲಿ ನಿನ್ನೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೌಪ್ಯವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಉಭಯ ನಾಯಕರ ನಡುವೆ ನಡೆದಿರುವ ಮಾತಿನ ಪ್ರಕಾರ ಅವಿಶ್ವಾಸ ನಿರ್ಣಯದ ವೇಳೆ ಮತದಾನ ನಡೆದರೆ ಜೆಡಿಎಸ್ ಇದರಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರೇ ಪಕ್ಷದ ನಿಲುವನ್ನು ಸಿಎಂ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಯಡಿಯೂರಪ್ಪ ಅವರು, ತಮ್ಮ ಸರ್ಕಾರಕ್ಕೆ ಸ್ಪಷ್ಟ ಬಹಮತ ಇದ್ದರೂ, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಕೈ ಕೊಡಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಜೆಡಿಎಸ್ ಬೆಂಬಲ ಪಡೆಯಲು ಮುಂದಾಗಿದ್ದಾರಂತೆ. ಒಂದು ವೇಳೆ ಜೆಡಿಎಸ್ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ತಟಸ್ಥ ನಿಲುವಿಗೆ ಬಂದರೆ ಬಿಜೆಪಿ ತಾತ್ಕಾಲಿಕವಾಗಿ ಎದುರಾಗಿದ್ದ ಬಹುದೊಡ್ಡ ಗಂಡಾಂತರದಿಂದ ಪಾರಾಗುವುದು ಖಚಿತ.
ಮುಂದಿನ ಆರು ತಿಂಗಳವರೆಗೆ ಯಡಿಯೂರಪ್ಪ ಅವರ ಕುರ್ಚಿ ಮತ್ತಷ್ಟು ಭದ್ರವಾಗಲಿದೆ. ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡನೆ ಮಾಡುವ ಮುನ್ನ ಕನಿಷ್ಟ ಸೌಜನ್ಯಕ್ಕಾದರೂ ತಮ್ಮ ಬಳಿ ಚರ್ಚೆ ಮಾಡದೆ, ಕಾಂಗ್ರೆಸ್ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದೇ ಜೆಡಿಎಸ್ ತಟಸ್ಥ ನಿಲುವಿಗೆ ಕಾರಣ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.