ಬೆಂಗಳೂರು:ರಾಜ್ಯ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು ಟಿ ಖಾದರ್ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ನಾಳೆ ಆಯ್ಕೆ ಪ್ರತಿಕ್ರಿಯೆ ನಡೆಯಲಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಯು ಟಿ ಖಾದರ್ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಾಳೆ ಅಧಿಕೃತವಾಗಿ ಆಯ್ಕೆಯಾದಲ್ಲಿ ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ವಿಧಾನ ಸಭಾಧ್ಯಕ್ಷ ಎಂಬ ಖ್ಯಾತಿ ಪಡೆಯಲಿದ್ದಾರೆ. ಸಚಿವರಾಗಿ, ವಿಪಕ್ಷ ಉಪನಾಯಕರಾಗಿಯೂ ಸೇವೆ ಸಲ್ಲಿಸಿರುವ ಅನುಭವವನ್ನು ಖಾದರ್ ಹೊಂದಿದ್ದಾರೆ.
ವಿಧಾನಸಭೆಯಲ್ಲಿ 135 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ಗೆ ಇಬ್ಬರು ಪಕ್ಷೇತರರು ಸಹ ಬೆಂಬಲ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಪಕ್ಷ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನುಮಾನ. ಒಂದೊಮ್ಮೆ ಔಪಚಾರಿಕವಾಗಿ ಸ್ಪರ್ಧೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಸೋಲು ಖಚಿತ. ಆದ್ದರಿಂದ ಖಾದರ್ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚತವಾಗಿದೆ.
ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರ ನಡುವೆ ಉತ್ತಮ ಬಾಂಧವ್ಯವನ್ನು ಖಾದರ್ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಸದನವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಅನುಕೂಲ ಆಗುವ ನಿಟ್ಟಿನಲ್ಲಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದನದ ಅತ್ಯಂತ ಹಿರಿಯ ಸದಸ್ಯರಾದ ಹಳಿಯಾಳ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಇವರನ್ನೇ ಪೂರ್ಣಾವಧಿ ಸ್ಪೀಕರ್ ಆಗಿ ನೇಮಿಸುವ ಕಾಂಗ್ರೆಸ್ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ದೇಶಪಾಂಡೆ ಹಿಂದೇಟು ಹಾಕಿ ಸಚಿವ ಸ್ಥಾನದತ್ತ ಕಣ್ಣು ನೆಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ, ಹಿರಿಯ ಶಾಸಕರಾದ ಹೆಚ್.ಕೆ. ಪಾಟೀಲ್ ಹಾಗೂ ಬಿ.ಆರ್. ಪಾಟೀಲ್ ಅವರನ್ನೂ ಸಹ ಸ್ಪೀಕರ್ ಸ್ಥಾನಕ್ಕೆ ಸಂಪರ್ಕಿಸಲಾಗಿತ್ತು. ಜೊತೆಗೆ ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಬಸವರಾಜ ರಾಯರೆಡ್ಡಿ, ಮಧುಗಿರಿಯ ಶಾಸಕ ಕೆ. ಎನ್. ರಾಜಣ್ಣ, ಮೊಳಕಾಲ್ಮೂರಿನ ಎನ್. ವೈ ಗೋಪಾಲಕೃಷ್ಣ ಅವರ ಮನವೊಲಿಸಲು ಪಕ್ಷ ಯತ್ನಿಸಿತ್ತು. ಆದರೆ, ಇವರ್ಯಾರು ಸ್ಪೀಕರ್ ಸ್ಥಾನದಲ್ಲಿ ಕೂರಲು ಒಪ್ಪಿಲ್ಲ. ಸೋಮವಾರ ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದು, ಸ್ಪೀಕರ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೂರು ದಿನಗಳ ಅಧಿವೇಶನ ಬುಧವಾರ ಮುಕ್ತಾಯವಾಗಲಿದೆ.
ಯುಟಿ ಖಾದರ್ ಹಿನ್ನೆಲೆ: 2007ರಲ್ಲಿ ತಮ್ಮ ತಂದೆ ತಂದೆ ಯು.ಟಿ.ಫರೀದ್ ಅವರ ನಿಧನದಿಂದ ಶಾಸಕ ಸ್ಥಾನ ತೆರವಾಗಿತ್ತು. ಆಗ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಖಾದರ್ ಗೆಲುವು ದಾಖಲಿಸಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದರು. ನಂತರ 2008, 2013, 2018 ಹಾಗೂ 2023ರಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ, ತಾವು ಶಾಸಕರಾಗಿದ್ದ 2007ರಿಂದ 2013ರ ಅವಧಿಯ ವಿಧಾನಸಭೆಯ ಅತ್ಯುತ್ತಮ ಕಾರ್ಯ ವೈಖರಿಗಾಗಿ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಅವಾರ್ಡ್ ಪಡೆದಿದ್ದಾರೆ.
2013ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ 2016ರ ತನಕ ಸೇವೆ ಸಲ್ಲಿಸಿದ್ದಾರೆ. 2018ರ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವಸತಿ ನಿಗಮ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್, ಕರ್ನಾಟಕ ಕೊಳಗೇರಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2021ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿ 2023ರ ವರೆಗೆ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ:ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್: ಕರಾವಳಿ ರಾಜಕಾರಣಿಯ ರಾಜಕೀಯ ಹಾದಿ..