ಬೆಂಗಳೂರು:ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಂಬೈನ ದಾದರ್ ಈಸ್ಟ್ನಲ್ಲಿನ ಖಾಸಗಿ ಆಸ್ಪತ್ರೆಗೆ ಶಾಸಕ ಶ್ರೀಮಂತ್ ಪಾಟೀಲ್ ದಾಖಲಾಗಿದ್ದು, ನಿನ್ನೆ ಕಾಂಗ್ರೆಸ್ ಶಾಸಕರು ತಂಗಿದ್ದ ಪ್ರಕೃತಿ ರೆಸಾರ್ಟ್ನಿಂದ ಅವರು ಪರಾರಿಯಾಗಿದ್ದರು ಎನ್ನಲಾಗಿತ್ತು.
ನಿನ್ನೆ ರಾತ್ರಿ ಬೆಂಗಳೂರಿನ ದೇವನಹಳ್ಳಿ ಸಮೀಪದ ಪ್ರಕೃತಿ ರೆಸಾರ್ಟ್ನಿಂದ ಏಕಾಏಕಿ ಕಣ್ಮರೆಯಾಗಿದ್ದ ಶ್ರೀಮಂತ ಪಾಟೀಲ್ ದಿಢೀರ್ ಮುಂಬೈಗೆ ತೆರಳಿ ಅಲ್ಲಿ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಾಗಿರುವ ಅಚ್ಚರಿ ಮೂಡಿಸುತ್ತಿದೆ.
ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿರಬಹುದು ಎಂಬ ಆತಂಕದಿಂದ ಕಾಂಗ್ರೆಸ್ ನಾಯಕರು ಅವರನ್ನು ನಗರದಲ್ಲಿ ಹುಡುಕುತ್ತಿದ್ದರೆ, ಅವರು ವಿಮಾನವೇರಿ ಯಾವ ಸಂದರ್ಭದಲ್ಲಿ ಮುಂಬೈಗೆ ತೆರಳಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಈಗಾಗಲೇ ಅನಾರೋಗ್ಯದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಾಗೇಂದ್ರ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಶ್ವಾಸಮತಯಾಚನೆ ಸಂದರ್ಭ ಆಗಮಿಸುವುದು ಅನುಮಾನ ಎನ್ನಲಾಗುತ್ತಿದೆ. ಇದೀಗ ಇವರ ಜೊತೆ ಶ್ರೀಮಂತ ಪಾಟೀಲ್ ಕೂಡ ಅನಾರೋಗ್ಯದ ಕಾರಣದಿಂದ ವಿಧಾನಸಭೆಯಿಂದ ದೂರ ಉಳಿದಿರುವುದು ಕಾಂಗ್ರೆಸ್ ಪಕ್ಷದಲ್ಲಿ ಸಹಜವಾಗಿ ಆತಂಕ ಮೂಡಿಸಿದೆ.
ರಾಮಲಿಂಗ ರೆಡ್ಡಿ ಇಂದು ವಿಧಾನ ಸಭೆಗೆ ಆಗಮಿಸಿ ಕಾಂಗ್ರೆಸ್ ಪಾಳಯದಲ್ಲಿ ಕುಳಿತುಕೊಂಡು ತಮ್ಮ ಬೆಂಬಲವನ್ನು ಪಕ್ಷಕ್ಕೆ ಮರಳಿ ವ್ಯಕ್ತಪಡಿಸಿದ್ದು, ಕಾಂಗ್ರೆಸ್ಗೆ ಒಂದು ಸಮಾಧಾನಕರ ಸಂಗತಿ. ಆದರೆ ದಿಢೀರ್ ಕಣ್ಮರೆಯಾಗಿರುವ ಶ್ರೀಮಂತ ಪಾಟೀಲ್ ಆಸ್ಪತ್ರೆಗೆ ದಾಖಲಾಗಿರುವುದು ತಲೆಬಿಸಿಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಅವರನ್ನು ಹೇಗಾದರೂ ಕರೆತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬಹುದಾದರೂ ಮುಂಬೈನಲ್ಲಿರುವ ಶ್ರೀಮಂತ ಪಾಟೀಲ್ ಅವರನ್ನು ಕರೆಸುವುದು ಅನುಮಾನ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಶ್ರೀಮಂತ ಪಾಟೀಲ್ ಆಸ್ಪತ್ರೆಗೆ ದಾಖಲಾಗಿರುವ ಚಿತ್ರಗಳು ಬಿಡುಗಡೆಯಾಗಿದ್ದು, ಸಹಜವಾಗಿ ಇದು ಮೈತ್ರಿ ಸರ್ಕಾರದಲ್ಲಿ ಒಂದಿಷ್ಟು ಆತಂಕವನ್ನುಂಟು ಮಾಡುವಂತಾಗಿದೆ.