ಬೆಂಗಳೂರು: ನನ್ನ ಹೆಸರು ಹಿಡಿದು ಕರೆಯಿರಿ. ಹಾಸನ ಜಿಲ್ಲೆ ಶಾಸಕ ಅಂದರೆ ಹೇಗೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಸಿಡಿಮಿಡಿಗೊಂಡ ಘಟನೆ ವಿಧಾನಸಭೆಯಲ್ಲಿ ನಡೆಯಿತು. ವಿಧಾನಸಭೆಯ ಕಲಾಪದಲ್ಲಿ ನಿಯಮ 69ರ ಚರ್ಚೆಯಲ್ಲಿ ತೆಂಗು ಮತ್ತು ಕೊಬ್ಬರಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವುದರಿಂದ ಹಾಗೂ ಕನಿಷ್ಟ ಬೆಂಬಲ ಬೆಲೆಯೂ ಸಹ ಕಡಿಮೆಯಾಗುತ್ತಿರುವುದರಿಂದ ಬೆಂಬಲ ಬೆಲೆ ಹೆಚ್ಚಿಸುವ ಬಗ್ಗೆ ನಡೆದ ಚರ್ಚೆ ವೇಳೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಅರಸೀಕೆರೆ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಮಧ್ಯೆ ರೋಚಕ ಜಟಾಪಟಿ ನಡೆಯಿತು. ಚರ್ಚೆ ಆರಂಭಿಸಿದ ಹೆಚ್ಡಿಕೆ ಹಾಸನ ಜಿಲ್ಲೆಯ ಶಾಸಕ ಎಂದು ಹೆಸರು ಉಲ್ಲೇಖಿಸದೇ ಮಾತು ಆರಂಭಿಸಿದರು.
ಈ ವೇಳೆ ಹಾಸನ ಜಿಲ್ಲೆಯ ಶಾಸಕ ಎಂದು ಕರೆದ ಮಾಜಿ ಸಿಎಂ ಹೆಚ್ಡಿಕೆಗೆ ಶಿವಲಿಂಗೇಗೌಡ ಸಿಡಿಮಿಡಿಗೊಂಡರು. ಎದ್ದು ನಿಂತು ನಾವು ಬಡವರ ಮಕ್ಕಳು, ಯಾಕೆ ನನ್ನನ್ನು ಹಾಸನ ಜಿಲ್ಲೆಯ ಶಾಸಕರು ಅಂತಾ ಕರೀತೀರಿ. ಹೆಸರು ಹಿಡಿದು ಕರೀರಿ, ನಿಮಗೆ 10 ಲಕ್ಷ ಜನರು ಸೆಲ್ಫಿ ತೆಗೆದುಕೊಂಡರೆ, ನನಗೆ 2 ಲಕ್ಷ ಜನ ಆದರೂ ಸೆಲ್ಫಿ ತೆಗೆಯುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸರಿಯಾದ ಸಮಯಕ್ಕೆ ಸದನಕ್ಕೆ ಬರುವ ಸದಸ್ಯರಿಗೆ ಸೂಕ್ತ ಬಹುಮಾನ: ಸ್ಪೀಕರ್ ಯು.ಟಿ.ಖಾದರ್ ಘೋಷಣೆ
ನಿಮ್ಮನ್ನು ನಾವು ಎರಡು ಸಾರಿ ಮುಖ್ಯಮಂತ್ರಿಗಳಾಗಿ ಮಾಡಿಲ್ವಾ..?. ನೀವು ನನ್ನ ಹೆಸರು ಹಿಡಿದು ಕರೆಯೋದು ಬೇಡ. ಆದರೆ ಹಾಸನ ಜಿಲ್ಲೆಯ ಶಾಸಕರು ಅಂತಾ ಯಾಕೆ ಕರೀತೀರಿ. ಈವಾಗ ಏನೋ ನೀವು ನಮ್ಮ ವಿಶ್ವಾಸ ಕಳೆದುಕೊಂಡ್ರಿ, ಅದಕ್ಕಾಗಿ ನಾವು ಹೊರಗಡೆ ಬಂದಿದ್ದೇವೆ. ಆದರೆ, ನೀವು ಹಾಸನ ಜಿಲ್ಲೆಯ ಶಾಸಕರು ಅಂತಾ ಕರೆಯೋದು ಎಷ್ಟು ಸರಿ?. ಎಂದು ಪ್ರಶ್ನಿಸಿದರು. ಕೊನೆಗೂ ಆಯ್ತು ಇರೀ ಶಿವಲಿಂಗೇಗೌಡ್ರೇ, ಅದೇನೋ ನಿನ್ನೆ ಹೇಳ್ರಿದ್ರಲ್ವ ವರ್ಗಾವಣೆಯ ದಾಖಲೆ ಕೊಡಿ ಅಂತಾ ಎಂದು ಕೊಬ್ಬರಿ ಬಗ್ಗೆ ಕುಮಾರಸ್ವಾಮಿ ಮಾತು ಮುಂದುವರಿಸಿದರು.