ಬೆಂಗಳೂರು: ನಗರದ ಹೈಫೈ ಏರಿಯಾದ ಜನರನ್ನು ಕಳ್ಳರು ಟಾರ್ಗೆಟ್ ಮಾಡಿಕೊಳ್ಳಲು ಶುರುವಿಟ್ಟುಕೊಂಡಿದ್ದಾರೆ. ಈ ಬಾರಿ ಖದೀಮರು ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕನ ಪತ್ನಿಯ ಮೊಬೈಲ್ ಫೋನ್ ಕದ್ದೊಯ್ದಿದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಬೆಂಗಳೂರಿನ ಡಾಲರ್ಸ್ ಕಾಲೋನಿ, ಸದಾಶಿವನಗರ ಸೇರಿದಂತೆ ಪ್ರತಿಷ್ಠಿತ ಏರಿಯಾಗಳಲ್ಲಿ ಇತ್ತೀಚೆಗೆ ಕಳ್ಳತನ ಜಾಸ್ತಿಯಾಗುತ್ತಿದೆ. ಈ ಹಿಂದೆ ಕೂಡಾ ಸದಾಶಿವನಗರದಲ್ಲಿ 3 ಪ್ರತಿಷ್ಠಿತ ವ್ಯಕ್ತಿಗಳ ಬೆಲೆ ಬಾಳುವ ವಸ್ತುಗಳನ್ನು ಸ್ನಾಚ್ ಮಾಡಿರುವ ಪ್ರಕರಣಗಳು ದಾಖಲಾಗಿತ್ತು. ಮುಂಜಾನೆ, ಸಾಯಂಕಾಲ ಸ್ಯಾಂಕಿ ಕೆರೆ ಸುತ್ತಮುತ್ತ ವಾಕಿಂಗ್ ಮಾಡುವವರನ್ನು ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ 6:45 ರ ಸಮಯದಲ್ಲಿ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಪತ್ನಿ ಶೃತಿ ಖರ್ಗೆ ವಾಕಿಂಗ್ ಮಾಡುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು, ಐಫೋನ್ 11 ಮೊಬೈಲ್ ಫೋನ್ ಅನ್ನು ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇಬ್ಬರು ಖದೀಮರಿಗೆ ಶೋಧ:ಶೃತಿ ಖರ್ಗೆ ಮೊದಲು ಒಬ್ಬರೇ ವಾಕಿಂಗ್ ಮಾಡುತ್ತಿದ್ದದ್ದನ್ನು ಗಮನಿಸಿದ ಖದೀಮರು ಬೈಕ್ ನಲ್ಲಿ ಫಾಲೋ ಮಾಡಿದ್ದಾರೆ. ನಂತರ ಮೊಬೈಲ್ ಫೋನ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಘಟನೆಯ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕ ಖರ್ಗೆ ಆಪ್ತ ಸಹಾಯಕರಾದ ಪ್ರದೀಪ್ ದೂರು ದಾಖಲಿಸಿದ್ದಾರೆ. ಫೋನ್ ಕದ್ದ ಇಬ್ಬರು ಕಳ್ಳರಿಗೆ ಪೊಲೀಸ್ ಸಿಬ್ಬಂದಿ ಶೋಧ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಓದಿ:ತಿರಂಗಾ ಹಿಡಿದು ತಾವೆಲ್ಲ ಒಂದೇ ಎಂದು ಕಾಲೇಜಿಗೆ ಬಂದರು.. ಉನ್ಮಾದ ದ್ವೇಷವಲ್ಲವಿದು, ವಿದ್ಯಾರ್ಥಿಗಳ ದೇಶ ಭಕ್ತಿ..