ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಭದ್ರಕೋಟೆ ಶಾಂತಿನಗರ.. ಹ್ಯಾರಿಸ್ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಲು ಬಿಜೆಪಿ, ಜೆಡಿಎಸ್​​ ರಣತಂತ್ರ

ಈ ಬಾರಿ ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಶಾಸಕ ಎನ್​ ಎ ಹ್ಯಾರಿಸ್ ಹಾಗೂ ಬಿಜೆಪಿಯಿಂದ ಮಾಜಿ ಕಾರ್ಪೊರೇಟರ್ ಶಿವಕುಮಾರ್​ರನ್ನು ಕಣಕ್ಕಿಳಿಸಿದೆ.

ಶಾಸಕ ಎನ್​ ಎ ಹ್ಯಾರಿಸ್
ಶಾಸಕ ಎನ್​ ಎ ಹ್ಯಾರಿಸ್

By

Published : May 7, 2023, 4:53 PM IST

Updated : May 7, 2023, 5:15 PM IST

ಬೆಂಗಳೂರು :ಮೂಲ ಸೌಕರ್ಯ ಕೊರತೆ, ಮಳೆಗಾಲದಲ್ಲಿ ರಾಜಕಾಲುವೆ ಉಕ್ಕಿ ಉಂಟಾಗುವ ಸಮಸ್ಯೆ. ಭಾರಿ ಸಂಖ್ಯೆಯಲ್ಲಿರುವ ಕೊಳೆಗೇರಿಗಳು. ಇವುಗಳ ಮಧ್ಯೆ ಅಲ್ಲಲ್ಲಿ ಅಭಿವೃದ್ಧಿ ಕಂಡ ಪ್ರದೇಶಗಳನ್ನು ಒಳಗೊಂಡ ಶಾಂತಿನಗರ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆಯಾಗಿದೆ.

ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನು ಭೇದಿಸಲು ಬಿಜೆಪಿ ಹಾಗೂ ಜೆಡಿಎಸ್​ ನಡೆಸುತ್ತಿರುವ ಪ್ರಯತ್ನ ಇಷ್ಟು ಕಾಲವಾದರೂ ಫಲ ಕೊಟ್ಟಿಲ್ಲ. ಈ ಸಾರಿ ಸತತ ಮೂರು ಸಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿರುವ ಕಾಂಗ್ರೆಸ್ ಶಾಸಕ ಎನ್​ ಎ ಹ್ಯಾರಿಸ್ ಈ ಸಾರಿಯೂ ಕೈ ಅಭ್ಯರ್ಥಿ. ಇವರನ್ನು ಮಣಿಸಲು ಬಿಜೆಪಿ ಕೆ ಶಿವಕುಮಾರ್ ಅವರಿಗೆ ಮಣೆ ಹಾಕಿದೆ. ಕಳೆದ ಸಾರಿ ಕೆ ವಾಸುದೇವ ಮೂರ್ತಿ ಅವರನ್ನು ಪಕ್ಷ ಕಣಕ್ಕಿಳಿಸಿತ್ತು. 18 ಸಾವಿರಕ್ಕೂ ಅಧಿಕ ಮತಗಳಿಂದ ಹ್ಯಾರಿಸ್​ ಗೆಲುವು ಸಾಧಿಸಿದ್ದರು. ಪುತ್ರ ನಲಪಾಡ್​ ಆಟಾಟೋಪದಿಂದಾಗಿ ಕಳೆದ ಸಾರಿ ಇವರಿಗೆ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗಿತ್ತು. ಆದರೆ ಕಡೆಯ ಕ್ಷಣದಲ್ಲಿ ಟಿಕೆಟ್​ ಗಿಟ್ಟಿಸಿಕೊಂಡು ಗೆಲುವು ಸಹ ಸಾಧಿಸಿದ್ದರು. ಈ ಸಾರಿಯೂ ಕಾಂಗ್ರೆಸ್​ಗೆ ಇವರೇ ಗೆಲ್ಲುವ ಫೇವರೆಟ್ ಅಭ್ಯರ್ಥಿಯಾಗಿದ್ದಾರೆ.

2004ರಲ್ಲಿ ರಘು ಇಲ್ಲಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದನ್ನು ಹೊರತುಪಡಿಸಿದರೆ 1983ರಲ್ಲಿ ಜನತಾ ಪಾರ್ಟಿಯ ಪಿ ಡಿ ಗೋವಿಂದರಾಜು ಹಾಗೂ 1994ರಲ್ಲಿ ಜನತಾದಳ ಅಭ್ಯರ್ಥಿ ಡಿ ಜಿ ಹೇಮಾವತಿ ಗೆದ್ದಿದ್ದರು. ಉಳಿದಂತೆ 1967ರಿಂದ ಇಲ್ಲಿವರೆಗೆ ನಡೆದ 12 ಚುನಾವಣೆಗಳ ಪೈಕಿ 9 ಸಾರಿ ಕಾಂಗ್ರೆಸ್ ಗೆದ್ದಿದೆ. ಈ ಸಾರಿ ಬೇರೆ ಪಕ್ಷಗಳು ಗೆಲ್ಲಬೇಕಾದರೆ ಪವಾಡವೇ ನಡೆಯಬೇಕು ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ. ಕ್ಷೇತ್ರ ಮರುವಿಂಗಡಣೆಯ ನಂತರ ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇವರೇ ನಿರ್ಣಾಯಕ. ಎನ್​. ಎ ಹ್ಯಾರಿಸ್ ಸಹ ಇದೇ ಸಮುದಾಯದವರಾಗಿದ್ದು, ಕಾಂಗ್ರೆಸ್ ಸಾಂಪ್ರದಾಯಿಕ ಮತ ಬ್ಯಾಂಕ್ ಇವರ ಕೈಬಿಟ್ಟು ಹೋಗಿಲ್ಲ.

ಹ್ಯಾರಿಸ್​ ಶಾಸಕರಾಗಿ, ಕಾಂಗ್ರೆಸ್ ನಾಯಕರಾಗಿ ವೈಯಕ್ತಿಕ ವರ್ಚಸ್ಸನ್ನು ಕ್ಷೇತ್ರ ಹಾಗೂ ಪಕ್ಷದಲ್ಲಿ ಉಳಿಸಿಕೊಂಡಿದ್ದಾರೆ. ಆದರೆ, ಈ ಸಲ ಅವರಿಗೆ ಬಿಜೆಪಿ, ಜೆಡಿಎಸ್​ ಹಾಗೂ ಆಮ್​ ಆದ್ಮಿ ಪಕ್ಷಗಳ ಸವಾಲು ಎದುರಾಗಿದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಜೆಡಿಎಸ್​ ಹಾಗೂ ಆಪ್​ ಸೆಳೆಯಲು ಶತಪ್ರಯತ್ನ ನಡೆಸುತ್ತಿವೆ. ಕಳೆದ ಸಾರಿ ಜೆಡಿಎಸ್​ ಶೇ. 11 ಮತ್ತು ಆಪ್​ ಶೇ. 2ರಷ್ಟು ಮತಗಳನ್ನು ಮಾತ್ರ ಸೆಳೆದಿದ್ದವು. ಆದರೆ, ಈ ಬಾರಿ ಅದು ಹೆಚ್ಚಳವಾಗುವ ಸಾಧ್ಯತೆ ಇದೆ. ಕಾಂಗ್ರೆಸ್​ ಸಾಂಪ್ರದಾಯಿಕ ಮತಬ್ಯಾಂಕ್​ಗೆ ಕನ್ನ ಬಿದ್ದರೆ ಗೆಲುವು ಕಷ್ಟ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಜೆಡಿಎಸ್​ ಪಕ್ಷ ಮಂಜುನಾಥ್ ಗೌಡಗೆ ಟಿಕೆಟ್​ ನೀಡಿದ್ದರೆ, ಕೆ. ಮಥಾಯ್​ ಅವರು ಆಪ್​ನಿಂದ ಕಣಕ್ಕಿಳಿದಿದ್ದಾರೆ.

ಶಾಂತಿ ನಗರ ವಿಧಾನಸಭಾ ಕ್ಷೇತ್ರ

ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಹ್ಯಾರಿಸ್ ವಿರುದ್ಧ ಈ ಸಾರಿ ಬಿಜೆಪಿ ಮಾಜಿ ಕಾರ್ಪೊರೇಟರ್ ಶಿವಕುಮಾರ್​ರನ್ನು ಕಣಕ್ಕಿಳಿಸಿದೆ. ವಾಸುದೇವಮೂರ್ತಿ ಎರಡು ಸಾರಿ ಸ್ಪರ್ಧಿಸಿ ಸೋತಿದ್ದ ಹಿನ್ನೆಲೆ ಟಿಕೆಟ್​ ಕೈತಪ್ಪಿದೆ. 2008, 2013 ಮತ್ತು 2018ರಲ್ಲಿ ಗೆದ್ದು ಬೀಗಿರುವ ಹ್ಯಾರಿಸ್ 2023ರಲ್ಲೂ ತಾವೇ ಗೆಲ್ಲುವುದು ಎಂಬ ವಿಶ್ವಾಸದಲ್ಲಿದ್ದಾರೆ.

ನೈರ್ಮಲ್ಯ ಕೊರತೆಯೂ ಹೆಚ್ಚೇ ಇದೆ:ಆದರೆ ಕ್ಷೇತ್ರದ ಸಮಸ್ಯೆಗಳು ಇವರಿಗೆ ತೊಂದರೆ ಉಂಟು ಮಾಡಬಹುದು. ಮೂರು ಅವಧಿಗೆ ಶಾಸಕರಾದರೂ, ಕ್ಷೇತ್ರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಅದನ್ನು ಪರಿಹರಿಸಿಲ್ಲ ಎಂಬ ಆರೋಪ ಇದೆ. ಇಕ್ಕಟ್ಟಾದ ರಸ್ತೆ, ಮಳೆ ಬಂದಾಗ ಉಕ್ಕುವ ರಾಜಕಾಲುವೆ, ಕಿರಿದಾದ ಸಂದಿಗೊಂದಿ ಅಭಿವೃದ್ಧಿಗೆ ತೊಡಕಾಗಿವೆ. ನೈರ್ಮಲ್ಯ ಕೊರತೆಯೂ ಹೆಚ್ಚೇ ಇದೆ. ತ್ಯಾಜ್ಯ ವಿಲೇವಾರಿ ಕೊರತೆ ಇದೆ. ಚರಂಡಿಗಳು ದೋಷಪೂರಿತವಾಗಿವೆ. ಇದರ ನಡುವೆಯೇ ಸಾರಿಗೆ ಕೇಂದ್ರ ಕಚೇರಿ, ವಿವಿಧ ವಾಣಿಜ್ಯ ಮಳಿಗೆಗಳು ಜನವಸತಿ ಪ್ರದೇಶದ ಮಧ್ಯದಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಮಳೆಗಾಲದ ಸಮಸ್ಯೆಗಳೂ ಹೇರಳವಾಗಿವೆ.

ಮತದಾರರ ವಿವರ ಗಮನಿಸಿದರೆ ಕ್ಷೇತ್ರದಲ್ಲಿರುವ ಒಟ್ಟು ಮತದಾರರು 2,26,046. ಪುರುಷ ಮತದಾರರು 1,15,590, ಮಹಿಳಾ ಮತದಾರರು 1,10,415, ತೃತೀಯ ಲಿಂಗಿ ಮತದಾರರು 41. ಮುಸ್ಲಿಮರ ವೋಟ್‌ಗಳೇ ನಿರ್ಣಾಯಕ. ತಮಿಳು ಭಾಷಿಕರು, ಕುರುಬರು, ಎಸ್‌ಸಿ-ಎಸ್‌ಟಿ, ತೆಲುಗು ಭಾಷಿಕರು, ಮಲಯಾಳಿ ಭಾಷಿಕರಿದ್ದಾರೆ. ಬ್ರಾಹ್ಮಣ ಸಮುದಾಯ, ಲಿಂಗಾಯತರು, ದೇವಾಂಗ ಸಮುದಾಯ ಹಾಗೂ ಒಕ್ಕಲಿಗರು ಕೂಡ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಅಭಿಪ್ರಾಯಗಳು :ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಸಾಕಷ್ಟು ಉತ್ತಮ ಕೆಲಸ ಆಗಿದೆ. ಮೋದಿ ನೇತೃತ್ವದಲ್ಲಿ ಎಲ್ಲವೂ ಅನುಕೂಲ ಆಗುತ್ತಿದೆ. ಈ ಸಾರಿ 120 ರಿಂದ 125 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ. ಆರೋಪ, ಪ್ರತ್ಯಾರೋಪ ಸಾಮಾನ್ಯ. ನಮ್ಮ ಸರ್ಕಾರ ಮಾಡಿದ ಕೆಲಸವನ್ನು ಜನರಿಗೆ ತಲುಪಿಸಬೇಕಿದೆ ಅಷ್ಟೆ. ರಾಜ್ಯ ನಾಯಕರೂ ಉತ್ತಮ ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಜನರಲ್ಲಿ ಉತ್ಸಾಹ ಹೆಚ್ಚಾಗಿದೆ. ವಾತಾವರಣ ನಿನ್ನೆಯ ನಂತರ ಬದಲಾಗಿದ್ದು, ಮತಗಳಿಕೆ ಪರ್ಸಂಟೇಜ್ ಹೆಚ್ಚಾಗಲಿದೆ. ಭ್ರಷ್ಟಾಚಾರ ಸಾಮಾನ್ಯ, ಸರ್ಕಾರದ ವಿರುದ್ಧ ಆರೋಪ ಬಂದೇ ಬರುತ್ತದೆ. ಆದರೆ ಯಾವುದೂ ಸಾಬೀತಾಗಿಲ್ಲ. ಮತದಾನ ನಮ್ಮ ಹಕ್ಕು ಎಂದುಕೊಳ್ಳಬೇಕು. ಜನಪ್ರತಿನಿಧಿಗಳಿಂದ ಯಾವುದೇ ನಿರೀಕ್ಷೆ ಮಾಡಬಾರದು ಎನ್ನುತ್ತಾರೆ ಬಿಹೆಚ್​ಇಎಲ್​ ನಿವೃತ್ತ ಉದ್ಯೋಗಿ ಹಾಗೂ ಬಿಜೆಪಿ ಮುಖಂಡ ಹನುಮಂತಪ್ಪ.

ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇತ್ತು. ಜನಪರ ಕೆಲಸ ಮಾಡಿದ ಸರ್ಕಾರವನ್ನು ಜನ ಒಪ್ಪಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಜನರಿಗೆ ಉತ್ತಮ ಅಭಿವೃದ್ಧಿ ತರುವ ಸರ್ಕಾರ ಇದೆ ಎಂದು ಜನ ಒಪ್ಪಿದ್ದಾರೆ. ರಾಜ್ಯದಲ್ಲಿ ಮೋದಿ ಪ್ರಚಾರ ನಡೆಸಲು ಬಂದಿದ್ದಾರೆ. ಜನರನ್ನು ನೋಡಲು ಅವರು ಬಂದಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಯೂ ಕ್ಷೇತ್ರದಲ್ಲಿ ತಮ್ಮ ಬಲ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.

ಹೊಸದಾಗಿ ಸಾಕಷ್ಟು ಕಂಪನಿಗಳು ಭಾರತದತ್ತ ಬರುತ್ತಿವೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸಹ ಸ್ಪಷ್ಟವಾಗಿಲ್ಲ. ಇದರಿಂದಾಗಿ ಅದನ್ನು ನಂಬಿಕೊಂಡು ಜನ ಮರುಳಾಗಲ್ಲ. ಇದಕ್ಕೆ ತಗಲುವ ವೆಚ್ಚ ಎಷ್ಟು? ಕಾಂಗ್ರೆಸ್ ಬಿಟ್ಟಿ ಭಾಗ್ಯಕ್ಕೆ ಜನ ಮನಸೋಲಲ್ಲಾ. ಬೆಂಗಳೂರು ಹೊರ ಭಾಗದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆ. ಹೊಸದಾಗಿ ಸಾಕಷ್ಟು ಕಂಪನಿಗಳು ಭಾರತದತ್ತ ಬರುತ್ತಿವೆ. ಇಲ್ಲಿ ಹೂಡಿಕೆ ಮಾಡಲು ಸಾಕಷ್ಟು ಕಂಪನಿಗಳು ಕೈಜೋಡಿಸುತ್ತಿವೆ. ದೇಶ ಸದೃಢವಾಗುತ್ತಿದೆ.

ಇಲ್ಲಿ ವೈದ್ಯರು, ಇಂಜಿನಿಯರ್​ಗಳು ಲಕ್ಷಾಂತರ ಸಂಖ್ಯೆಯಲ್ಲಿ ಹೊರ ಬರುತ್ತಾರೆ. ಆದರೆ ದೇಶಕ್ಕೆ ಅಪರೂಪದ ಒಂದು ಕೊಡುಗೆಯನ್ನು ದೇಶಕ್ಕೆ ನೀಡಬೇಕೆಂಬ ಹಂಬಲ ಹೊತ್ತು ಬರಬೇಕು. ಅಂತವರಿಗೆ ಪ್ರೋತ್ಸಾಹ ನೀಡುವ ಕಾರ್ಯ ಬಿಜೆಪಿ ಸರ್ಕಾರ ಮಾಡಲಿದೆ ಎನ್ನುತ್ತಾರೆ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖಂಡ ನರೇಂದ್ರ.

ಇದನ್ನೂ ಓದಿ :ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಕಾಂಗ್ರೆಸ್​ ಜಾರಿಗೆ ತರಲಿದೆ : ಭೂಪೇಶ್ ಬಘೇಲ್

Last Updated : May 7, 2023, 5:15 PM IST

ABOUT THE AUTHOR

...view details