ಬೆಂಗಳೂರು: ವಿಧಾನಸೌಧದಲ್ಲಿರುವ 12 ಲಕ್ಷ ಟನ್ ಸಾಮರ್ಥ್ಯದ ನೈಟ್ರೋಜನ್ ಟ್ಯಾಂಕ್ ಅನ್ನು ಆಕ್ಸಿಜನ್ ಟ್ಯಾಂಕ್ ಆಗಿ ಪರಿವರ್ತನೆ ಮಾಡುವುದು ಸೇರಿದಂತೆ ಆಮ್ಲಜನಕ ಕೊರತೆ ನೀಗಿಸಲು ಕಾಂಗ್ರೆಸ್ ನಾಯಕ ಹೆಚ್.ಕೆ. ಪಾಟೀಲ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೆಲವು ಮಹತ್ವದ ಸಲಹೆ ನೀಡಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮಾಜಿ ಸಚಿವ ಹಾಗು ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್ ಭೇಟಿ ನೀಡಿದರು. ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆಯ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಾನ್ಸ್ಪೋರ್ಟ್ ಸಮಸ್ಯೆ ಎಂದು ಹೇಳುತ್ತಾರೆ. ಜಿಂದಾಲ್, ಬಳ್ಳಾರಿಯಿಂದ ಬರಬೇಕು ಎನ್ನುತ್ತಾರೆ. ಜಿಂದಾಲ್ ನಲ್ಲಿ ಏರ್ಪೋರ್ಟ್ ಇದೆ, ಎಚ್ ಎ ಎಲ್ ಇದೆ. ಮೋದಿಯವರಿಗೆ ಹೇಳಿ ವಿಮಾನದ ಮೂಲಕ ಆಕ್ಸಿಜನ್ ಬರುವಂತೆ ಮಾಡಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಪ್ರತಿದಿನ ಆಕ್ಸಿಜನ್ ಕೊರತೆಯಿಂದ ಜನ ಸಾಯುತ್ತಿದ್ದಾರೆ. ಆಮ್ಲಜನಕ ಕೊರತೆ ಹೆಚ್ಚಾಗಿದೆ, ಸಮಸ್ಯೆ ಬಗೆಹರಿಸಲು ರಚನಾತ್ಮಕ ಸಲಹೆ ನೀಡಿದ್ದೇನೆ. ರಾಜ್ಯದಲ್ಲಿ ಆಗುತ್ತಿರುವ ಸಾವು ನೋವು ತಪ್ಪಿಸಲು ಕೆಲವು ಸಲಹೆ ನೀಡಿದ್ದೇನೆ. ಲಿಕ್ವಿಡ್ ಆಕ್ಸಿಜನ್ ಸಂಗ್ರಹಣೆ ಮಾಡಲು ಸ್ಥಳ ಇಲ್ಲ, ಹೀಗಾಗಿ ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ. ಆದರೆ ವಿಧಾನಸೌಧದ ಮಹಡಿ ಮೇಲಿಂದ ನಿಂತು ನೋಡಿದರೆ 10 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಇದೆ, ಒಟ್ಟು 12 ಲಕ್ಷದ 35 ಸಾವಿರ ಟನ್ ಸಾಮರ್ಥ್ಯದ ನೈಟ್ರೋಜನ್ ಟ್ಯಾಂಕ್ ಇದೆ, ಇದನ್ನು ಆಕ್ಷಿಜನ್ ಟ್ಯಾಂಕಾಗಿ ಬದಲಾಯಿಸಬಹುದು. ಅದು ಎರಡು ದಿನದ ಕೆಲಸ. ಇಸ್ರೋದಲ್ಲಿ ಟ್ಯಾಂಕ್ ಇದೆ, ಅದನ್ನು ಬಳಸಿಕೊಳ್ಳಬಹುದು. ಇದೆಲ್ಲದರ ಬಗ್ಗೆ ಸಿಎಂ ಗಮನಕ್ಕೆ ತಂದಿರುವುದಾಗಿ ಹೆಚ್ ಕೆ ಪಾಟೀಲ್ ತಿಳಿಸಿದರು.
13 ಲಕ್ಷ ಟನ್ ಆಕ್ಸಿಜನ್ ಅನ್ನು ಕೈಗಾರಿಕೆಯಲ್ಲಿ ಉತ್ಪಾದನೆ ಮಾಡುತ್ತಾರೆ. ನೀವು ಏನು ಮಾಡುತ್ತಿದ್ದೀರಿ, ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ವಿಜ್ಞಾನಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದ್ದೇನೆ. ಸಿಎಂ ಅವರು ನಮ್ಮ ಸಲಹೆ ಪರಿಗಣಿಸಿ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಮಾಹಿತಿ ನೀಡಿದರು.