ಬೆಂಗಳೂರು: ರಾಜ್ಯ ಸರ್ಕಾರ ಕೂಡಲೇ ಜಾತಿ ಜನಗಣತಿ ವರದಿ ಪಡೆದುಕೊಂಡು ಬಿಡುಗಡೆ ಮಾಡಲಿ. ಆ ವರದಿಯಂತೆ ನಿಯಮಾವಳಿಗಳನ್ನೂ ರೂಪಿಸಲಿ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.
ವಿಕಾಸಸೌಧದಲ್ಲಿ ಜಾತಿ ಜನಗಣತಿ ವರದಿ ವಿಚಾರವಾಗಿ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ರಚಿಸಿದ್ದ ಆಯೋಗಕ್ಕೆ ನಮ್ಮೆಲ್ಲರ ಸ್ವಾಗತವಿದೆ. ಈ ವರದಿ 2018 ರಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲ ಕಾರಣಗಳಿಂದ ಆಗಲಿಲ್ಲ. ಈಗ ಮತ್ತೊಂದು ಅವಕಾಶ ಬಂದಿದೆ. ರಾಜ್ಯೋತ್ಸವ ದಿನದಂದು ಈ ವರದಿಯನ್ನು ಪಡೆಯಲಿ. ವರದಿ ಸ್ವೀಕರಿಸಿದ ಮೇಲೆ ಅದರ ಮೇಲೆ ಚರ್ಚೆ ಆಗುತ್ತೆ. ಆ ನಂತರ ವರದಿ ಮೇಲೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿ ಎಂದರು.
ಜಾತಿ ಜನಗಣತಿಗೆ ವಿರೋಧ ಬರುತ್ತಿರುವುದು ಸಹಜ. ಅದೆಲ್ಲ ಅವರವರ ಅಭಿಪ್ರಾಯ. ಈ ವರದಿ ಬಿಡುಗಡೆ ಆದರೆ ಕೆಲವು ಸಮುದಾಯಗಳ ಸಂಖ್ಯೆ ಕಮ್ಮಿ ಆಗುತ್ತೆ ಅನ್ನೋದು ಸುಳ್ಳು. ಅದು ಮಾನಸಿಕ ಭ್ರಮೆ. ಲಿಂಗಾಯತರು, ಒಕ್ಕಲಿಗರು ತಲೆತಲಾಂತರದಿಂದ ಈ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ವರದಿ ಬಿಡುಗಡೆಯಾದರೆ ನಾವು ಕಮ್ಮಿ ಆಗಬಹುದು ಅನ್ನೋ ಕೀಳರಿಮೆ ಯಾರಿಗೂ ಬೇಡ. ಇದೊಂದೇ ಮಾನದಂಡ ಆಗಲ್ಲ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಗುರುತಿಸಿಕೊಳ್ಳಬೇಕು ಅನ್ನೋದು ಲಿಂಗಾಯತರ ಪ್ರಮುಖ ಬೇಡಿಕೆ. ಈ ಸಂಬಂಧ ನಾನೂ ಕೂಡಾ ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡುತ್ತೇನೆ. ಕೂಡಲೇ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆಯಲಿ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಲಿಂಗಾಯತರಿಗೆ ಸ್ಥಾನ ಕೊಡುವಂತೆ ಪತ್ರದ ಮೂಲಕ ಮನವಿ ಮಾಡಲಿ ಎಂದು ಒತ್ತಾಯಿಸಿದರು.