ಬೆಂಗಳೂರು: ರಾಜ್ಯದ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಕಾರ್ಯತಂತ್ರ ಹೆಣೆಯುವ ಕುರಿತ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ಶನಿವಾರ ನಡೆಯಲಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ನಾಳೆ ಬೆಳಗ್ಗೆ 11ಕ್ಕೆ ಪಕ್ಷದ ಹಿರಿಯ ಮುಖಂಡರ ಸಭೆ ನಡೆಯಲಿದೆ.
ಎಐಸಿಸಿ ವೀಕ್ಷಕರೂ ಪಾಲ್ಗೊಳ್ಳಲಿರುವ ಈ ಸಭೆಗೆ ಆಯಾ ಕ್ಷೇತ್ರಗಳ ಚುನಾವಣೆ ಉಸ್ತುವಾರಿ ಹೊತ್ತಿರುವ ಮುಖಂಡರು, ಮಾಜಿ ಮಂತ್ರಿಗಳು, ಶಾಸಕರು, ಸಂಸದರನ್ನು ಆಹ್ವಾನಿಸಲಾಗಿದೆ. ಶತಾಯಗತಾಯ ಮೂರು ಕ್ಷೇತ್ರಗಳನ್ನು ಗೆದ್ದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಕಾರ್ಯತಂತ್ರ ರೂಪಿಸಲಿದ್ದು, ಈ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಿದ್ದಾರೆ.
ಇದನ್ನು ಓದಿ:'ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ, ಬ್ಯಾಂಡ್ ಸೆಟ್ ನಾಯಕರನ್ನು ದೂರವಿಡಿ'