ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಜೊತೆ ಶುಕ್ರವಾರ ಕಾಂಗ್ರೆಸ್ ಮಹತ್ವದ ಸಭೆ ನಡೆಸಿತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಂಪುಟ ಸದಸ್ಯರು ಹಾಗೂ ಶಾಸಕರು ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪರಾಜಿತ ಅಭ್ಯರ್ಥಿಗಳನ್ನು ಕರೆಸಿ ಅವರಿಗೆ ಆದ ಸಮಸ್ಯೆಯನ್ನ ಕೇಳಿದ್ದೇವೆ. ಮುಂಬರುವ ದಿನಗಳಲ್ಲಿ ಇವರಿಗೆ ಶಕ್ತಿ ತುಂಬುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಯಾವ ರೀತಿ ಮಾಡಬೇಕು ಬಗ್ಗೆ ಚರ್ಚೆಯಾಗಿದೆ. ಸೋತರೂ ಸಹ ನಮಗೆ ನಮ್ಮ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಅತ್ಯಂತ ಪ್ರಮುಖ. ಹೀಗಾಗಿ ಎಲ್ಲರನ್ನು ಕರೆಸಿ ಅವರ ದುಃಖ ದುಮ್ಮಾನವನ್ನು ಕೇಳಿದ್ದೇವೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ಪಕ್ಷ ಬಲವರ್ಧನೆ ಮಾಡಬೇಕು ಎಂಬ ಗುರಿಯನ್ನು ನೀಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಸಂಪರ್ಕದಲ್ಲಿದ್ದು ಅವರೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು ಮತ್ತು ಪಕ್ಷದ ಗ್ಯಾರಂಟಿಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಮಾಡಬೇಕು. ಪಕ್ಷ, ಜಾತಿ ಮತ್ತು ಧರ್ಮ ಭೇದವನ್ನು ಮರೆತು ಎಲ್ಲರನ್ನ ಒಂದೇ ರೀತಿ ಪರಿಗಣಿಸಿ ಕಾರ್ಯ ನಿರ್ವಹಿಸುವಂತೆ ಸೂಚನೆ ಕೊಟ್ಟಿದ್ದೇವೆ ಎಂದರು.
ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 135 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದೆ. 89 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿರುವುದಕ್ಕೆ ಸಕಾರಣ ಅರಿಯುವ ಪ್ರಯತ್ನವನ್ನು ಇಂದಿನ ಸಭೆಯಲ್ಲಿ ಮಾಡಿದೆ. ಒಂದೆಡೆ ಐದು ಗ್ಯಾರಂಟಿ ಪೋಷಣೆಗಳು ಹಾಗೂ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಮೇಲೆ ಬಹುತೇಕ ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಪಕ್ಷ ಅದಾಗಿಯೂ ಕೆಲವೆಡೆ ಹಿನ್ನಡೆ ಅನುಭವಿಸಿದೆ.