ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ನಡೆಸುತ್ತಿರುವ ಕಸರತ್ತು ಬುಧವಾರ ಸಹ ಅಪೂರ್ಣಗೊಂಡಿತು. ಎಐಸಿಸಿ ವರಿಷ್ಠರೊಂದಿಗೆ ಚರ್ಚಿಸಿ ಎರಡನೇ ಪಟ್ಟಿ ಅಂತಿಮಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟು ಮಾತುಕತೆ ನಡೆಸುತ್ತಿದ್ದಾರೆ. ಆದರೆ ಬಾಕಿ ಉಳಿದಿರುವ ನೂರು ಸ್ಥಾನಗಳಿಗೆ ಅಭ್ಯರ್ಥಿ ಅಂತಿಮಗೊಳಿಸುವುದು ಕಗ್ಗಂಟಾಗಿ ಪರಿಣಮಿಸಿದೆ. ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದು ಕಾಂಗ್ರೆಸ್‌ಗೆ ಅಷ್ಟು ದೊಡ್ಡ ಸವಾಲಾಗಿ ಪರಿಣಮಿಸಲಿಲ್ಲ.
ಆಕಾಂಕ್ಷಿಗಳಿಂದ ಸಾಕಷ್ಟು ಒತ್ತಡ:ಹಾಲಿ ಶಾಸಕರು ಹಾಗೂ ಕಳೆದ ಸಾರಿ ಸ್ಪರ್ಧಿಸಿ ಸೋತಿರುವ ಜನಪ್ರಿಯ ನಾಯಕರಿಗೆ ಟಿಕೆಟ್ ಘೋಷಿಸಿ ಕೈ ತೊಳೆದುಕೊಂಡಿತ್ತು. ಆದರೆ ಅಲ್ಲಿಯೂ 8-10 ಕ್ಷೇತ್ರಗಳಲ್ಲಿ ಅಪಸ್ವರ ಕಾಡಿತ್ತು. ಇದರ ಜೊತೆ ಒಂಬತ್ತು ಹಾಲಿ ಶಾಸಕರನ್ನ ಮೊದಲ ಪಟ್ಟಿಯಲ್ಲಿ ಅಂತಿಮಗೊಳಿಸದೇ ಇರುವುದು ಸಹ ಇನ್ನಷ್ಟು ಒತ್ತಡಕ್ಕೆ ಕಾರಣವಾಗಿತ್ತು. ಟಿಕೆಟ್ ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ರಾಜ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಆಕಾಂಕ್ಷಿಗಳಿಂದ ಸಾಕಷ್ಟು ಒತ್ತಡ ಕೇಳಿಬಂದಿತ್ತು.
ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಕಸರತ್ತು: ಇದೀಗ ಎರಡನೇ ಪಟ್ಟಿಗೆ ಹೆಸರು ಅಂತಿಮಗೊಳಿಸುವ ಸಂದರ್ಭದಲ್ಲಿ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಪ್ರತಿಕ್ಷೇತ್ರಕ್ಕೂ ಒಬ್ಬ ಅಭ್ಯರ್ಥಿಯನ್ನು ಅಂತಿಮಗೊಳಿಸುವ ವಿಚಾರದಲ್ಲಿ ರಾಜ್ಯ ನಾಯಕರ ನಡುವೆ ಒಮ್ಮತ ಮೂಡಿ ಬರುತ್ತಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮದೇ ಆದ ಪ್ರಭಾವ ಬೀರಿ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಇತರೆ ರಾಜ್ಯ ನಾಯಕರು ಸಹ ತಮ್ಮವರಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಒತ್ತಡ ಹೇರುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅವಕಾಶ ಇದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿದೆ. ಮೇಲ್ನೋಟಕ್ಕೆ ಬಿಜೆಪಿಯ ಭ್ರಷ್ಟಾಚಾರ ಹಾಗೂ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಲಾಭದಾಯಕವಾಗಲಿದೆ ಎಂಬ ಮಾತುಗಳು ಕೇಳಿ ಬರುವ ಜೊತೆಗೆ ಸಮೀಕ್ಷೆಗಳು ಸಹ ಕಾಂಗ್ರೆಸ್‌ಗೆ ಪೂರಕವಾಗಿ ಕಂಡುಬಂದಿವೆ. ಈ ಹಿನ್ನಲೆ ಸಾಕಷ್ಟು ಮಂದಿ ಟಿಕೆಟ್ಗಾಗಿ ಒತ್ತಡ ಹೇರುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ತಮ್ಮವರಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಕೆಲವೆಡೆ ಪ್ರತಿಷ್ಠೆ ಪ್ರದರ್ಶಿಸುತ್ತಿರುವುದು ಪಟ್ಟಿ ವಿಳಂಬವಾಗುವುದಕ್ಕೆ ಕಾರಣವಾಗಿದೆ. ಮಂಗಳವಾರ ಸಂಜೆಯೇ ಅಂತಿಮಗೊಳ್ಳಬೇಕಿದ್ದ ಎರಡನೇ ಪಟ್ಟಿ ಸಾಧ್ಯವಾಗದೆ ಇಂದಿಗೆ ಮುಂದೂಡಿಕೆಯಾಗಿತ್ತು. ಒಟ್ಟು ನೂರು ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯನ್ನ ಅಂತಿಮಗೊಳಿಸಿರುವ ನಾಯಕರು ಉಳಿದ 55 ಕ್ಷೇತ್ರಗಳಿಗೆ ಒಮ್ಮತ ಮೂಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಬುಧವಾರ ಸಹ ಇದೇ ಪರಿಸ್ಥಿತಿ ಮುಂದುವರಿದಿದ್ದು, ಗುರುವಾರ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಲು ತೀರ್ಮಾನಿಸಲಾಗಿದೆ.