ಬೆಂಗಳೂರು :ಬಿಜೆಪಿ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ ಪುಷ್ಪ ಅಮರನಾಥ್ ನೇತೃತ್ವದಲ್ಲಿ ಅಡುಗೆ ವಾಣಿಜ್ಯ ಮತ್ತು ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಎಲ್ಪಿಜಿ ಸಿಲಿಂಡರನ್ನು ತಲೆಯ ಮೇಲೆ ಹೊತ್ತು ಕಾಂಗ್ರೆಸ್ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ :ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಘೋಷಣೆ ಕೂಗಿದರು. ಈಗಾಗಲೇ ಜನ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದಾರೆ. ಒಂದೆಡೆ ಸರ್ಕಾರದ ಭ್ರಷ್ಟಾಚಾರದಿಂದ ಜನರಿಗೆ ಸವಲತ್ತುಗಳು ಸಿಗುತ್ತಿಲ್ಲ. ಇರುವ ಸೌಲಭ್ಯಗಳ ಸದ್ಬಳಕೆ ಆಗುತ್ತಿಲ್ಲ. ನಿರಂತರವಾಗಿ ಬಿಜೆಪಿ ಸರ್ಕಾರ ಜನರ ಮೇಲೆ ಒಂದಲ್ಲ ಒಂದು ಹೊರೆ ಹೊರಿಸುತ್ತಲೇ ಇದೆ ಆಕ್ರೋಶ ಹೊರಹಾಕಿದರು.
ಇದೀಗ ಅಡುಗೆ ಅನಿಲ ಬೆಲೆ ಏರಿಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಹೋಟೆಲ್ ಹಾಗೂ ವಾಣಿಜ್ಯ ಬಳಕೆಯ ಅನಿಲ ಉಪಯೋಗಿಸಿ ಉದ್ಯಮ ನಡೆಸುವವರು ಬೆಲೆ ಏರಿಕೆ ಮಾಡಲಿದ್ದಾರೆ. ಅಲ್ಲದೆ ಗ್ರಹ ಬಳಕೆ ಅಡುಗೆ ಅನಿಲದ ಬೆಲೆಯು ವಿಪರೀತ ಎನ್ನುವ ಮಟ್ಟಕ್ಕೆ ಏರಿದ್ದು, ಜನರ ಜೀವನ ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.