ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಆರೋಪಿಸುವ ಬಿಜೆಪಿ ತಮ್ಮ ಮಾಜಿ ಮುಖ್ಯಮಂತ್ರಿಗಳನ್ನು ಯಾವ ರೀತಿ ನಡೆಸಿಕೊಂಡಿದೆ ಎಂಬ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಒಬಿಸಿ ಅಧ್ಯಕ್ಷ ಮಧುಬಂಗಾರಪ್ಪ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿ ಕಂಗಾಲು : ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಎನ್ ಎ ಹ್ಯಾರಿಸ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಕಾಂಗ್ರೆಸ್ ಪಕ್ಷ ತಮ್ಮ ಮಾಜಿ ಸಿಎಂಗಳ ಕಡೆಗಣಿಸಿದೆ ಎಂದು ಬಿಜೆಪಿಯವರು ಪೇಡ್ ಪಬ್ಲಿಸಿಟಿ ಮಾಡುತ್ತಿದ್ದಾರೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಕಾಂಗ್ರೆಸ್ನ ಮಾಜಿ ಸಿಎಂಗಳಾದ ದೇವರಾಜ ಅರಸು ವೀರೇಂದ್ರ ಪಾಟೀಲ್ ಹಾಗೂ ಬಂಗಾರಪ್ಪ ಅವರ ವಿಚಾರ ಮುಂದೆ ಇಟ್ಟು ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದ್ದಾರೆ ಎಂದರು.
ಬಿಜೆಪಿಯವರು ಅಡ್ವಾಣಿಯನ್ನು ಎಲ್ಲಿ ಇಟ್ಟಿದ್ದಾರೆ : ಜಾಹೀರಾತುಗಳಲ್ಲಿ ಫೋಟೋ ಹಾಕಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಪೇಪರ್ ಗಳಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಇವರೆಲ್ಲರೂ ಹಿಂದುಳಿದ ಸಮುದಾಯ ಕಟ್ಟಿದವರು. ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂದು ಹಾಕುತ್ತಾರೆ. ಬಂಗಾರಪ್ಪನವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಹೇಳುತ್ತಾರೆ. ಇವರು ಅಡ್ವಾಣಿಯವರನ್ನು ಎಲ್ಲಿ ಇಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. 3570 ಕಿ.ಮೀ ಮಗ ನಡೆಯುತ್ತಾನೆ. ಈ ನೋವು ಅವರ ತಾಯಿಗಿದೆ. ಹಾಗಾಗಿ ಬಂದು ಮಗನ ಜೊತೆ ಹೆಜ್ಜೆ ಹಾಕುತ್ತಾರೆ. ಅದನ್ನೂ ಬಿಜೆಪಿಯವರು ಕೀಳುಮಟ್ಟದಲ್ಲಿ ಕಾಣುತ್ತಾರೆ. ಇವರ ಮನಸ್ಥಿತಿ ಹೇಗಿದೆ ನೀವೇ ಯೋಚಿಸಿ ಎಂದು ಹೇಳಿದರು.
ಬಿಜೆಪಿ ನೀಚ ಬುದ್ಧಿಯನ್ನು ಬಿಡಬೇಕು: ಬಿಜೆಪಿಯವರು ಪತ್ರಿಕೆ ಜಾಹೀರಾತಿನಲ್ಲಿ ಬಂಗಾರಪ್ಪ ಫೋಟೋ ಹಾಕಿದ್ದೇಕೆ? ಫೋಟೋ ಹಾಕುವ ಮುನ್ನ ತಿಳಿದುಕೊಳ್ಳಬೇಕಲ್ಲ. ಬಿಜೆಪಿಗೆ ಹೋದ್ರೂ ಬಂಗಾರಪ್ಪ ಅಲ್ಲಿ ಉಳಿಯಲಿಲ್ಲ. ಒಬ್ಬರ ಬಗ್ಗೆ ಹೆಸರು ಉಪಯೋಗ ಮಾಡಬೇಕಾದರೆ ಯೋಚಿಸಬೇಕು.
ರಾಜ್ಯದ ಜನರಿಗೆ ಅವರ ಕೊಡುಗೆ ತಿಳಿಯಬೇಕು. ಬಿಜೆಪಿಗೆ ಮಾನಮರ್ಯಾದೆ ಇದ್ಯಾ? ಆಶ್ರಯ,ಆರಾಧನಾ ಕಾರ್ಯಕ್ರಮ ತಂದಿದ್ದು ಯಾರು? ಪುಕ್ಸಟ್ಟೆ ಕರೆಂಟ್ ಕೊಟ್ಟಿದ್ದು ಹಿಂದೆ ಕಾಂಗ್ರೆಸ್. ಭೂ ಹಕ್ಕು ಕಾಯ್ದೆಯನ್ನು ತಂದವರು ಯಾರು? ಜನರಿಗೆ ತಪ್ಪು ಮಾಹಿತಿ ಕೊಡಬಾರದು. ಇಂತಹ ನೀಚ ಬುದ್ಧಿಯನ್ನು ಅವರು ಬಿಡಬೇಕು. ಯಾರು ಬೆಳೆಸ್ತಾರೆ ಅವರನ್ನೇ ತುಳಿಯುವವರು ಬಿಜೆಪಿ ಎಂದು ಹೇಳಿದರು.